ಬಿಹಾರದಿಂದ ಕನಸು ಹೊತ್ತು ಮುಂಬೈ ಮಾಯಾನಗರಿಗೆ ಕಾಲಿಟ್ಟು ಕಿರುತೆರೆಯಿಂದ ಬಣ್ಣದ ಪಯಣ ಆರಂಭಿಸಿ ಬೆಳ್ಳಿತೆರೆಯ ಬಹುಬೇಡಿಕೆಯ ನಟನಾಗಿ ಬೆಳೆದ ಮುಗ್ಧ ಮುಖದ, ಹ್ಯಾಂಡ್ ಸಮ್ ಬಾಯ್ ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲವಾಗಿ ಇಂದಿಗೆ ಒಂದು ವರ್ಷ. ಯುವಮನಸ್ಸುಗಳ ಕನಸಿನ ರಾಜನಾಗಿದ್ದ ಸುಶಾಂತ್ ಸಿಂಗ್ ಮೊದಲ ಪುಣ್ಯಸ್ಮರಣೆಯಂದು ಬಾಲಿವುಡ್ ಸೆಲೆಬ್ರೆಟಿಗಳು, ಅಭಿಮಾನಿಗಳು ಕಣ್ಣೀರು ಮಿಡಿದಿದ್ದಾರೆ.

ಬಹುಬೇಡಿಕೆಯ ನಟನಾಗಿ ಬದುಕು ಕಟ್ಟುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ 2020 ಜೂನ್ 14 ರಂದು ಅಪಾರ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಚಿಚೋರೆಯಂತಹ ಸಿನಿಮಾದ ಮೂಲಕ ಅಭಿಮಾನಿಗಳಲ್ಲಿ ಬದುಕಿನ ಉತ್ಸಾಹ ತುಂಬಿದ್ದ ನಟ ಸುಶಾಂತ್, ತಮ್ಮ ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.

ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಪತ್ತೆಯಾಗಿದ್ದರು. ಕುಟುಂಬ ವರ್ಗ ಇದೊಂದು ಕೊಲೆ ಎಂದು ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಬಾಂದ್ರಾ ಪೊಲೀಸರು ತನಿಖೆ ನಡೆಸಿದ್ದರು.

ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸಿದ್ದು, ಈ ಸಂಬಂಧ ಸುಶಾಂತ್ ರಿಂಗ್ ರಜಪೂತ್ ಹಾಲಿ ಪ್ರೇಯಸಿ ರಿಯಾ ಚಕ್ರವರ್ತಿ, ಮಾಜಿ ಪ್ರೇಯಸಿ ಸೇರಿ ಹಲವರನ್ನು ವಿಚಾರಣೆ ನಡೆಸಿದೆ. ಇದುವರೆಗೂ ಸಿಬಿಐ ತನಿಖಾ ವರದಿ ಅಂತಿಮಗೊಂಡಿಲ್ಲ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಒಂದು ವರ್ಷದ ಬಳಿಕವೂ ಸಾವಿನ ಕಾರಣ ರಹಸ್ಯವಾಗಿಯೇ ಉಳಿದುಕೊಂಡಿದೆ.

ಕಿರುತೆರೆಯ ಸೀರಿಯಲ್ ಬಳಿಕ 2013 ರಲ್ಲಿ ಬಾಲಿವುಡ್ ಗೆ ಎಂಟ್ರಿಕೊಟ್ಟ ಸುಶಾಂತ್ ಸಿಂಗ್ ಮೊದಲ ಚಿತ್ರ ಕಾಯ್ ಪೋ ಚೆ. ಅಷ್ಟೇನು ಸದ್ದು ಮಾಡದ ಈ ಸಿನಿಮಾದ ಬಳಿಕ ಸುಶಾಂತ್ ಸಿಂಗ್ ಅಮೀರ್ ಖಾನ್ ನಿರ್ದೇಶನ ಹಾಗೂ ನಟನೆಯ ಪಿಕೆಯಲ್ಲಿ ಭರವಸೆ ಮೂಡಿಸುವ ನಟನಾಗಿ ಕಾಣಿಸಿಕೊಂಡರು.

2016 ರಲ್ಲಿ ಕ್ರಿಕೆಟ್ ಲೋಕದ ದೈತ್ಯ ಪ್ರತಿಭೆ ಎಂ.ಎಸ್.ದೋನಿ ದ್ ಅನ್ ಟೋಲ್ಡ್ ಸ್ಟೋರಿ ಸುಶಾಂತ್ ಸಿಂಗ್ ವೃತ್ತಿ ಬದುಕನ್ನೇ ಬದಲಾಯಿಸಿತು. ಅಲ್ಲಿಂದಾಚೆಗೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾದ ಸುಶಾಂತ್ ನಟಿಸಿದ ಕೆಲವೇ ಕೆಲವು ಚಿತ್ರಗಳ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದರು.

ಕೇದಾರನಾಥ್ ಹಾಗೂ ಚಿಚೋರೆ ಸುಶಾಂತ್ ಸಿಂಗ್ ನಟನೆಯನ್ನು ಒರೆಗೆ ಹಚ್ಚಿದ್ದಲ್ಲದೇ ಭವಿಷ್ಯದಲ್ಲಿ ಬಾಲಿವುಡ್ ಅಳಬಲ್ಲ ನಟ ಎಂಬುದನ್ನು ಸಾಬಿತುಪಡಿಸಿತ್ತು. ಇಂಥ ಅದ್ಭುತ ನಟನ ಕೊನೆಯ ಚಿತ್ರ ದಿಲ್ ಬೇಚಾರಾ. ಚಿತ್ರ ಪೋಸ್ಟ್ ಪೊಡಕ್ಷನ್ ಹಂತದಲ್ಲಿದ್ದಾಗಲೇ ಸುಶಾಂತ್ ಸಾವಗೀಡಾಗಿದ್ದು, ಈ ಚಿತ್ರ ರಿಲೀಸ್ ಬಳಿಕ ಹಲವು ದಾಖಲೆ ಬರೆಯಿತು.