ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಜನಮಾನಸದಿಂದ ಮರೆಯಾಗುವ ಮುನ್ನವೇ ಮತ್ತೊಮ್ಮೆ ಬಾಲಿವುಡ್ ರಾಜಕೀಯಕ್ಕೆ ಬೇಸತ್ತು ಬಾಲಿವುಡ್ ನ ಯುವ ನಟ ಸಂದೀಪ್ ನಹಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಜೊತೆ ಎಂ.ಎಸ್.ದೋನಿ ಚಿತ್ರದಲ್ಲಿ ನಟಿಸಿದ್ದ ಸಂದೀಪ್ ತಮ್ಮ ಫ್ಲ್ಯಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮುಂಬೈನ ತಮ್ಮ ಫ್ಲ್ಯಾಟ್ ನಲ್ಲಿ ಸಂದೀಪ್ ನಹಾರೆ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಸಂದೀಪ್ ನೇಣುಬಿಗಿದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಾವಿಗೂ ಮುನ್ನ ಫೇಸ್ ಬುಕ್ ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಸಂದೀಪ್, ಮುಂಬೈನಲ್ಲಿ ತಾವು ನಟರಾಗಲು ಪಟ್ಟ ಶ್ರಮ ಹಾಗೂ ಈಗ ಇರುವ ಸ್ಥಿತಿಯನ್ನು ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲ ಬಾಲಿವುಡ್ ನ ಆಂತರಿಕ ರಾಜಕೀಯದಿಂದ ತಾವು ಹೇಗೆ ಅವಕಾಶ ವಂಚಿತರಾಗುತ್ತಿದ್ದೇವೆ ಎಂಬುದನ್ನು ಉಲ್ಲೇಖಿಸಿ ಸಾವಿನ ಕಾರಣವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಅದಲ್ಲದೇ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಸಂದೀಪ್ ವೈಯಕ್ತಿಕ ಬದುಕು ಕೂಡ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಸಂದೀಪ್ ಪತ್ನಿ ಕಾಂಚನಾ ಹಾಗೂ ಆಕೆಯ ತಾಯಿ ಸಂದೀಪ್ ರನ್ನು ಪೀಡಿಸುತ್ತಿದ್ದರು ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಸುಧೀರ್ಘ ಪೋಸ್ಟ್ ನಲ್ಲಿ ಸಂದೀಪ್ ಆತ್ಮಹತ್ಯೆಗೂ ಮುನ್ನ ನಾನು ಪರಿಸ್ಥಿತಿ ಸುಧಾರಿಸಬಹುದೆಂದು ಸ್ವಲ್ಪ ಸಮಯ ಕಾದು ನೋಡಿದೆ. ಆದರೆ ಅದು ಸಾಧ್ಯವಾಗದ ಕಾರಣ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ. ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ .

ಅಕ್ಷಯ್ ಕುಮಾರ್ ಜೊತೆ ಕೇಸರಿ ಚಿತ್ರದಲ್ಲೂ ನಟಿಸಿದ್ದ ಸಂದೀಪ್ ಅವಕಾಶಗಳಿಲ್ಲದೇ ಕಂಗಾಲಾಗಿದ್ದರು ಎನ್ನಲಾಗಿದೆ.