ತುಮಕೂರು: ಬಾಲಿವುಡ್ ಮಾಫಿಯಾಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದ ನಟಿ ಕಂಗನಾ ರನಾವುತ್ ಇದೀಗ ರೈತರನ್ನು ನಿಂದಿಸಿದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋರ್ಟ್ ನಿರ್ದೇಶನದಂತೆ ಕಂಗನಾ ರನಾವುತ್ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಂಗನಾ ಅನ್ನದಾತರಾದ ರೈತರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ತುಮಕೂರು ಮೂಲದ ವಕೀಲರೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ತುಮಕೂರಿನ ಜೆಎಂಎಫ್ ಸಿ ನ್ಯಾಯಾಲಯ ಕಂಗನಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಕ್ಯಾತ್ಸಂದ್ರ ಪೊಲೀಸರು ಕಂಗನಾ ವಿರುದ್ಧ ಸೆಕ್ಷನ್ 108,153,504 ಹಾಗೂ 44 ಅಡಿ ಎಫ್.ಆಯ್.ಆರ್.ದಾಖಲಾಗಿದೆ.

ಕಂಗನಾ ವಿರುದ್ಧ ತುಮಕೂರು ನಿವಾಸಿ ವಕೀಲ ರಮೇಶ್ ನಾಯಕ್ ಕೋರ್ಟ್ ಗೆ ದೂರು ನೀಡಿದ್ದರು. ಕೇಂದ್ರ ಸರ್ಕಾರದ ರೈತ ಮಸೂದೆಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಪಂಜಾಬ್ ಸೇರಿದಂತೆ ದೇಶದ ವಿವಿಧೆಡೆ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದರು. ಕರ್ನಾಟಕದಲ್ಲೂ ಹಲವಾರು ಕಡೆಗಳಲ್ಲಿ ಪ್ರತಿಭಟನೆ ನಡೆದಿತ್ತು.

ಈ ಮಸೂದೆಯನ್ನು ಬೆಂಬಲಿಸಿದ್ದ ನಟಿ ಕಂಗನಾ, ಕೇಂದ್ರ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಟ್ವೀಟ್ ಮಾಡಿದ್ದ ಕಂಗನಾ ಈ ಮಸೂದೆ ವಿರೋಧಿಸುವವರು ಟೆರರಿಸ್ಟ್ ಗಳು ಎಂದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಕಂಗನಾ ಪೊಲೀಸ್ ವಿಚಾರಣೆ ಎದುರಿಸುವಂತಾಗಿದೆ.