ಚಿಕ್ಕಮಗಳೂರು : ದೀಪಾವಳಿ ಬಂತೆಂದ್ರೆ ಸಾಕು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ದೇವಿರಮ್ಮನ ಬೆಟ್ಟದಲ್ಲಿ ಭಕ್ತ ಸಾಗರ. ಮುಂಜಾನೆಯಿಂದಲೇ ಬರಿಗಾಲಲ್ಲಿ ಲಕ್ಷಾಂತರ ಮಂದಿ 3,000ಕ್ಕೂ ಅಡಿ ಎತ್ತರದಲ್ಲಿರುವ ಬೆಟ್ಟವನ್ನೇರುವ ಭಕ್ತರು ದೇವಿಯ ಹರಿಕೆ ಸಲ್ಲಿಸುತ್ತಿದ್ದರು. ಹೀಗೆ ಮಾಡುವುದರಿಂದ ಇಷ್ಟಾರ್ಥಗಳು ಸಿದ್ದಿಸುತ್ತವೆ ಅನ್ನೋದು ಭಕ್ತರ ನಂಬಿಕೆ. ಆದ್ರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ದೇವೀರಮ್ಮನ ಬೆಟ್ಟವೇರುವುದಕ್ಕೆ ನಿಷೇಧ ಹೇರಲಾಗಿದೆ.

ಕಾಫಿನಾಡು ಚಿಕ್ಕಮಗಳೂರು ಪ್ರವಾಸಿಗರ ಪಾಲಿನ ನೆಚ್ಚಿನ ತಾಣ. ಅದ್ರಲ್ಲೂ ಕಾಫಿನಾಡು ಧಾರ್ಮಿಕ ಕ್ಷೇತ್ರಗಳ ಬೀಡೂ ಹೌದು, ಅದ್ರಲ್ಲೂ ಪ್ರಸಿದ್ದಿ ಪಡೆದಿರೋದು ಬಿಂಡಿಗ ದೇವೀರಮ್ಮ. ಚಿಕ್ಕಮಗಳೂರು ನಗರದಿಂದ 25 ಕಿ.ಮೀ. ದೂರದಲ್ಲಿರುವ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ದೇವೀರಮ್ಮ ಭಕ್ತರ ಪಾಲಿಗೆ ಇಷ್ಟಾರ್ಥವನ್ನು ಸಿದ್ದಿಸುತ್ತಾಳೆ ಅನ್ನೋ ನಂಬಿಕೆಯಿದೆ.

ಅನಾಧಿಕಾಲದಿಂದಲೂ ದೀಪಾವಳಿಯ ಸಮಯದಲ್ಲಿ ಭಕ್ತರು ದೇವೀರಮ್ಮನ ಬೆಟ್ಟವನ್ನೇರಿ ದೇವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಭಕ್ತರು ಕೊಂಡು ಹೋಗುವ ಕಟ್ಟಿಗೆಯನ್ನು ಸಂಜೆಯ ಹೊತ್ತಲ್ಲಿ ಬೆಳಗುವ ಮೂಲಕ ನಾಡಿನಾದ್ಯಂತ ದೀಪಾವಳಿಯನ್ನು ಆಚರಿಸಲಾಗುತ್ತದೆ. ಬಿಂಡಿಗ ದೇವೀರಮ್ಮನ ಕ್ಷೇತ್ರದಲ್ಲಿ ನಡೆಯುವ ಈ ಆಚರಣೆಗೆ ಐತಿಹಾಸಿಕ ಹಿನ್ನೆಲೆಯೂ ಇದೆ. ಮೈಸೂರು ಮಹಾರಾಜರು ಕೂಡ ಮಡಿಲಕ್ಕಿಯನ್ನು ಕಳುಹಿಸಿಕೊಡುತ್ತಿದ್ದರು.

ಇತ್ತೀಚಿನ ಕೆಲ ವರ್ಷಗಳಲ್ಲಿ ದೇವಿರಮ್ಮನ ಕ್ಷೇತ್ರ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ದೀಪಾವಳಿಯ ದಿನದಂದ ದೇವಿರಮ್ಮನ ಬೆಟ್ಟವನ್ನೇರಲು ರಾಜ್ಯದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದಾರೆ. ಹಚ್ಚ ಹಸಿರಿನ ವನಸಿರಿಯ ನಡುವಲ್ಲೇ, ಜಾರುವ ಬೆಟ್ಟವನ್ನು ಬರಿಗಾಲಲ್ಲೇ ಏರುವುದೇ ಒಂದು ರೋಮಾಂಚನ. ದೇವೀರಮ್ಮನ ಸ್ಮರಣೆಯನ್ನು ಮಾಡುತ್ತಾ ಹರಿಕೆಯನ್ನು ಕಟ್ಟಿಕೊಂಡ ಭಕ್ತರು ಕ್ಷೇತ್ರಕ್ಕೆ ಬಂದು ಹರಿಕೆಯನ್ನು ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆರ. ಆದರೆ ಈ ಬಾರಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುವ ಭೀತಿಯ ಹಿನ್ನೆಲೆಯಲ್ಲಿ ಕೇವಲ 200 ಜನರಿಗೆ ಮಾತ್ರವೇ ಬೆಟ್ಟವನ್ನೇರಲು ಅನುಮತಿಯನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರು ದೇವಿರಮ್ಮನ ಬೆಟ್ಟಕ್ಕೆ ಬಾರದಂತೆ ಆಡಳಿತ ಮಂಡಳಿ ಮನವಿಯನ್ನು ಮಾಡಿಕೊಂಡಿದೆ.

ಈ ಬಾರಿ ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ಈ ವರ್ಷ ಬರಬೇಡಿ, ಆಡಳಿತ ಮಂಡಳಿ ಹಾಗೂ ಸರ್ಕಾರದ ಆದೇಶಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಕೊರೊನಾ ಹಿನ್ನೆಲೆ ಸರ್ಕಾರ ಕೂಡ 200 ಜನರಲ್ಲಿ ಮುಗಿಸಲು ಸೂಚಿಸಿರೋದ್ರಿಂದ ಆಡಳಿತ ಮಂಡಳಿಯವ್ರು ಮಾತ್ರ ಬೆಟ್ಟ ಹತ್ತಿ ದೇವಿಗೆ ಪೂಜೆ ಮಾಡಲು ನಿರ್ಧರಿಸಿದ್ದು, ಈ ವರ್ಷ ಭಕ್ತರು ದೇವಾಲಯಕ್ಕೆ ಬಾರದಂತೆ ಆಡಳಿತ ಮಂಡಳಿ ಮನವಿ ಮಾಡಿದೆ. ಕಿರಿದಾದ ಜಾಗದಲ್ಲಿ ಲಕ್ಷಾಂತರ ಮಂದಿ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸರಕಾರ ಹಾಗೂ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿವೆ.

ಹರಿಕೆ ತೀರಿಸುವ ಭಕ್ತರು ಒಂದು ದಿನ ಮೊದಲು ಅಥವಾ ನಂತರ ಬಂದು ಹರಿಕೆಯನ್ನು ತೀರಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ದೇವಾಲಯದಲ್ಲಿ ಹಣ್ಣು ಕಾಯಿ ಹಾಗೂ ಪೂಜೆ ಮಾಡಿಸಲು ಅವಕಾಶವನ್ನು ನಿಷೇಧಿಸಲಾಗಿದೆ. ಭಕ್ತರು ಕೆಳಗಿರುವ ದೇವರ ದರ್ಶನವನ್ನ ಸರದಿ ಸಾಲಲ್ಲಿ ಪಡೆಯಬಹುದಾಗಿದೆ. ಭಕ್ತರು ಮನೆಯಲ್ಲಿದ್ದುಕೊಂಡೇ ಸಂಜೆ ಬೆಟ್ಟಕ್ಕೆ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದ್ದಾರೆ.

ಬೆಟ್ಟದ ತಾಯಿಗೂ ಕೊರೊನಾ ಎಫೆಕ್ಟ್ ತಗುಲಿದ್ದು ಭಕ್ತರಿಗೆ ದೇವೀರಮ್ಮನ ದರ್ಶನ ಇಲ್ಲದಂತಾಗಿದೆ. ವರ್ಷಂಪ್ರತಿ ದೇವಿರಮ್ಮನ ಬೆಟ್ಟವನ್ನೇರಲು ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ಈ ಬಾರಿ ಕೊರೊನಾ ಸೋಂಕು ನಿರಾಸೆ ಮೂಡಿಸಿದೆ.