ಜ್ಯೂನಿಯರ್ ಚಿರುಗೆ ಅಭಿಮಾನಿಯ ಗಿಫ್ಟ್….! ಕಲಘಟಗಿಯಲ್ಲಿ ಸಿದ್ಧವಾಯ್ತು ಸುಂದರ ತೊಟ್ಟಿಲು…!!

ಜ್ಯೂನಿಯರ್ ಚಿರು ಸರ್ಜಾ….ಸಧ್ಯ ಸರ್ಜಾ ಹಾಗೂ ಮೇಘನಾ ರಾಜ್ ಮನೆಯಲ್ಲಿ  ದುಃಖ ಮರೆಸುವ ಶಕ್ತಿಯಾಗಿ, ನಾಳೆಯ ಭರವಸೆ ಯಾಗಿ ಬೆಳಕು ಮೂಡಿಸಿದ್ದಾನೆ. ಇಂಥ ಜ್ಯೂನಿಯರ್ ಚಿರುಗೆ ನಾಡಿನಾದ್ಯಂತ ಕೊಡುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಧ್ರುವ್ ಸರ್ಜಾ ಬೆಳ್ಳಿಯ ತೊಟ್ಟಿಲು ತಂದಿದ್ದರೇ, ಇತ್ತ ಚಿರು-ಮೇಘನಾ ಅಭಿಮಾನಿಯೊಬ್ಬರು ಕಲಘಟಗಿಯ ಸುಪ್ರಸಿದ್ಧ ಮರದ ತೊಟ್ಟಿಲು ಗಿಫ್ಟ್ ಮಾಡಲು ಸಿದ್ಧವಾಗಿದ್ದಾರೆ.

ಕಲಘಟಗಿಯ ಮರದ ತೊಟ್ಟಿಲು ವಿಶ್ವದಾದ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ. ಈಗಾಗಲೇ ರಾಕಿಂಗ್ ಸ್ಟಾರ್ ಯಶ್, ರಾಜಕುಮಾರ್ ಕುಟುಂಬ, ನಲ್ಲೂರು ಅರಮನೆ,ಗೋವಾ,ಕೇರಳ,ತಮಿಳುನಾಡು ಹಾಗೂ ಅಮೇರಿಕಾದ್ಯಂತವೂ ಹಲವೆಡೆ ಕಲಘಟಗಿಯ ತೊಟ್ಟಿಲು ತಲುಪಿದೆ. ಮಾಜಿ ಸಚಿವ ಜನಾರ್ಧನ್ ರೆಡ್ಡಿ ಮೊಮ್ಮಗಳಿಗೂ ಇದೇ ತೊಟ್ಟಿಲನ್ನು  ನೀಡಲಾಗಿದ್ದು, ಅವರ ಕುಟುಂಬದ ಮೆಚ್ಚುಗೆಗೆ ಪಾತ್ರವಾಗಿದೆ.

ಇದೀಗ ದಿವಂಗತ ಚಿರಂಜೀವಿ ಸರ್ಜಾ ಪುತ್ರನಿಗೂ ಮರದ ತೊಟ್ಟಿಲು ಸಿದ್ಧಪಡಿಸಲಾಗಿದ್ದು, ತೇಗಿನ ಮರ, ಅರಗು,ಅಂಟು ಬಳಸಿ ಸಿದ್ಧಪಡಿಸಲಾಗಿರುವ  ತೊಟ್ಟಿಲಿಗೆ ಸೂಕ್ಷ್ಮ ಕುಸುರಿ ಚಿತ್ರ, ಕೃಷ್ಣನ ತುಂಟಾಟದ ಚಿತ್ರ, ಮಕ್ಕಳ ಆಟಿಕೆಯನ್ನು ಅಳವಡಿಸಲಾಗಿದೆ. ಕನಿಷ್ಠ 100 ವರ್ಷ ಬಾಳಿಕೆ ಬರುವ  ತೊಟ್ಟಿಲು ಒಳ್ಳೆಯ ಗುಣಮಟ್ಟ ಹಾಗೂ ಲೈಟ್ ವೇಟ್ ಹೊಂದಿದೆ.

ಸಾಂಪ್ರದಾಯಿಕವಾಗಿ ತೊಟ್ಟಿಲು ತಯಾರಿಸುವ ಕೆಲಸವನ್ನು  ತಲೆತಲಾಂತರದಿಂದ ಮಾಡುತ್ತ ಬಂದಿರುವ ಮಾರುತಿ ಬಡಿಗೇರ್, ತಿಪ್ಪಣ್ಣ ಬಡಿಗೇರ,ಹರೀಶ್, ಶ್ರೀಶೈಲ್ ಬಡಿಗೇರ್  ಸರ್ಜಾ ಕುಟುಂಬಕ್ಕಾಗಿ ಈ ಸುಂದರ,ಕಲಾತ್ಮಕ ತೊಟ್ಟಿಲನ್ನು ಸಿದ್ಧಪಡಿಸಿದ್ದಾರೆ. ಹಾವೇರಿಯ ಗುತ್ತಲದ ಸ್ತ್ರೀಶಕ್ತಿ ಸೇವಾ ಸಂಘದ ಅಧ್ಯಕ್ಷೆ ಒನಿತಾ ಗುತ್ತಲ್ ತಮ್ಮ ಖರ್ಚಿನಲ್ಲಿ ಈ ತೊಟ್ಟಿಲನ್ನು ಜ್ಯೂನಿಯರ್ ಚಿರುಗೆ ಗಿಫ್ಟ್ ಮಾಡಲಿದ್ದಾರೆ.

ಗರ್ಭಿಣಿಯಾಗಿದ್ದಾಗ ಪತಿ ಕಳೆದುಕೊಂಡ ಮೇಘನಾ ಸರ್ಜಾ ನೋವು ಅರ್ಥ ಮಾಡಿಕೊಂಡು ಈಗಾಗಲೇ ಅವರಿಗೆ ಫೇಮಸ್ ಹಾವೇರಿ ಖಾರ-ಸಿಹಿ ತೆಗೆದುಕೊಂಡು ಹೋಗಿ ಕುಸುಬದ ಶಾಸ್ತ್ರ ಮಾಡಿ ಬಂದಿದ್ದೇವೆ. ಅವಾಗಲೇ ಪ್ರಸಿದ್ಧವಾದ ಕಲಘಟನಗಿಯ ತೊಟ್ಟಿಲು ಕೊಡುವುದಾಗಿ ಹೇಳಿ ಬಂದಿದ್ದೇವೆ. ನವೆಂಬರ್ 11 ರಂದು ಸುಂದರವಾದ  ಈ ತೊಟ್ಟಿಲನ್ನು ಅವರಿಗೆ ನೀಡಲಿದ್ದೇವೆ.

ಮಾನಸಿಕವಾಗಿ ನೊಂದಿರುವ ಮೇಘನಾ ರಾಜ್ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿ ಅವರೊಂದಿಗೆ ನಾವೆಲ್ಲ ಇದ್ದೇವೆ ಎಂಬ ಸಮಾಧಾನ ತುಂಬುವುದು ನಮ್ಮ ಉದ್ದೇಶ ಅಂತಿದ್ದಾರೆ ಒನಿತಾ ಗುತ್ತಲ್.

Comments are closed.