ಚಿಕ್ಕಮಗಳೂರು : ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಿಎಂ ಯಡಿಯೂರಪ್ಪಗೆ ಮತ್ತೊಂದು ತಲೆನೋವು ಶುರುವಾಗಿದೆ. ಬಿಜೆಪಿಯ ನಾಲ್ವರು ಮುಖಂಡರು ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚಿಕ್ಕಮಗಳೂರಿನ ಹೊರವಲಯದಲ್ಲಿರುವ ಸರಾಯ್ ರೆಸಾರ್ಟ್ ನಲ್ಲಿ ನಾಲ್ವರು ಬಿಜೆಪಿ ಮುಖಂಡರು ರಹಸ್ಯ ಸಭೆ ನಡೆಸಿರೋದು ಬಯಲಾಗಿದೆ. ನಿನ್ನೆ ರಾತ್ರಿಯಿಂದಲೇ ಬಿಜೆಪಿ ಮುಖಂಡರಾದ ಸಚಿವ ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಸಿ.ಪಿ.ಯೋಗೀಶ್ವರ್ ಹಾಗೂ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸ್ಥಾನದ ಖಾತೆ ಹಂಚಿಕೆ ವಿಚಾರದಲ್ಲಿ ಈಗಾಗಲೇ ಅಸಮಾಧಾನವನ್ನು ಹೊರಹಾಕಿದ್ದ ಸಚಿವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾಧಾನ ಪಡಿಸಿದ್ದರು. ಆದರೆ ಇದರ ಬೆನ್ನಲ್ಲೇ ಇದೀಗ ಸಚಿವರು ಹಾಗೂ ಶಾಸಕರು ರೆಸಾರ್ಟ್ ಸೇರಿರುವುದು ಸಿಎಂ ಯಡಿಯೂರಪ್ಪಗೆ ತಲೆನೋವು ತರಿಸಿದೆ.

ಪ್ರಮುಖವಾಗಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿಯೇ ಬಿಜೆಪಿ ಸರಕಾರಕ್ಕೆ ಪ್ಲ್ಯಾನ್ ರೂಪಿಸಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.