ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಎದುರಾಗಿದೆ. ಪ್ರಾಥಮಿಕ ಶಾಲಾರಂಭ ಸದ್ಯಕ್ಕೆ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲೀಗ 1 ರಿಂದ 5 ನೇ ತರಗತಿ ವರೆಗಿನ ವಿದ್ಯಾರ್ಥಿ ಗಳನ್ನು ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.
1 ರಿಂದ 5ನೇ ತರಗತಿವರೆಗಿನ ಶಾಲಾರಂಭದ ಕುರಿತು ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೂಡ ಎರಡು ವಾರಗಳ ಕಾಲ ಕಾದು ನೋಡುವುದಾಗಿ ಹೇಳಿದ್ದಾರೆ. ಆದರೆ ನೆರೆಯ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೊರೊನಾ ಎರಡನೇ ಅಲೆ ತೀವ್ರ ತೆರನಾಗಿದ್ದು, ರಾಜ್ಯದಲ್ಲಿಯೂ ಸೋಂಕು ಹೆಚ್ಚುವ ಆತಂಕ ಸೃಷ್ಟಿಯಾಗಿದೆ. ಈಗಾಗಲೇ 8ರಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ.
ಆದರೆ ಬೆಂಗಳೂರು, ಕೇರಳ ಗಡಿಭಾಗ ಹಾಗೂ ಮಹಾರಾಷ್ಟ್ರ ಗಡಿಭಾಗದ ಶಾಲೆಗಳಲ್ಲಿ ಕೇವಲ 9ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಮಾತ್ರವೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಬಳ್ಳಾರಿ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೋಂಕಿತ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಅದ್ರಲ್ಲೂ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ. ಇದನ್ನು ರಾಜ್ಯ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಕೋವಿಡ್ ತಾಂತ್ರಿಕ ಸಮಿತಿ ಕೂಡ ಪ್ರಾಥಮಿಕ ಶಾಲೆಯನ್ನು ಸದ್ಯಕ್ಕೆ ಆರಂಭಿಸೋದು ಬೇಡ. ಒಂದೊಮ್ಮೆ ಪ್ರಾಥಮಿಕ ಶಾಲೆ ಆರಂಭಿಸಿದ್ರೆ, ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಳವಾಗೋ ಭೀತಿ ಎದುರಾಗಿದೆ. ಕೇರಳ, ಮಹಾರಾಷ್ಟ್ರಗಳಲ್ಲಿ ಈ ಬಾರಿ ಪರೀಕ್ಷೆಯನ್ನೇ ನಡೆಸದೇ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ನಿರ್ಧಾರಕ್ಕೆ ಬಂದಿದ್ದು, ರಾಜ್ಯದಲ್ಲಿಯೂ 1 ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಉತ್ತೀರ್ಣಗೊಳಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಮುಂದಿನ ಎರಡು ವಾರಗಳ ನಂತರ ಕೊರೊನಾ ಸೋಂಕಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ.