ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ನಡುವಿನ ತಿಕ್ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಇದೀಗ ಪಂಚಮಸಾಲಿ, ಕುರುಬರ ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಇದೀಗ ಬಿಎಸ್ ವೈಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
2ಎ ಮೀಸಲಾತಿಗಾಗಿ ಸುಮಾರು 23 ದಿನಗಳಿಂದಲೂ ಪಂಚಮಸಾಲಿ ಮಠಾಧೀಶರು ಹಾಗೂ ಎಸ್ ಟಿ ಮೀಸಲಾತಿಗಾಗಿ ಪಾದಯಾತ್ರೆಯನ್ನು ನಡೆಸಲಾಗುತ್ತಿದೆ. ಇದೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸ್ಪಷ್ಟನೆ ನೀಡುವಂತೆ ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
ಸ್ವಪಕ್ಷೀಯ ಶಾಸಕ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಡಿಯೂರಪ್ಪ ನಮ್ಮದು ರಾಷ್ಟ್ರೀಯ ಪಕ್ಷ, ನಾನು ಏಕಾಏಕಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರ ನಾಯಕರ ಅನುಮತಿಯನ್ನು ಪಡೆಯಬೇಕಾಗುತ್ತದೆ ಎಂದು ತಮ್ಮ ಅಸಹಾಯಕತೆಯನ್ನು ತೋರ್ಪಡಿಸಿದ್ದಾರೆ. ಮುಖ್ಯಮಂತ್ರಿಗಳು ನೀಡಿದ ಉತ್ತರಕ್ಕೆ ತೃಪ್ತರಾಗದ ಯತ್ನಾಳ್ ಮೀಸಲಾತಿ ಘೋಷಣೆಯನ್ನು ಮಾಡಬೇಕೆಂದು ಪಟ್ಟು ಹಿಡಿದರು. ಈ ವೇಳೆಯಲ್ಲಿ ಯಡಿಯೂರಪ್ಪ, ರಾಜ್ಯದಿಂದ ಆಯ್ಕೆಯಾದ 25 ಮಂದಿ ಸಂಸದರಿದ್ದಾರೆ ಅವರನ್ನು ಕರೆದುಕೊಂಡು ಪ್ರಧಾನಿ ಅವರ ಬಳಿಗೆ ಹೋಗಿ ಎಂದಿದ್ದಾರೆ.
ಇನ್ನೊಂದೆಡೆ ಸಿಎಂ ನೀಡಿರುವ ಹೇಳಿಕೆಯ ವಿರುದ್ದ ಪಂಚಮಸಾಲಿ ಹಾಗೂ ಕುರುಬ ಮಠಾಧೀಶರು ತಿರುಗಿಬಿದಿದ್ದಾರೆ. ಕಳೆದ ಕೆಲ ಸಮಯದಿಂದಲೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಪದೇ ಪದೇ ಹೇಳಿಕೆಯನ್ನು ನೀಡುತ್ತಿದ್ದು, ಸಿಎಂ ಯಡಿಯೂರಪ್ಪ ಪದಚ್ಯುತಿಗೆ ಆಗ್ರಹಿಸುತ್ತಿದ್ದಾರೆ. ಇದೀಗ ಇಬ್ಬರ ನಡುವಿನ ತಿಕ್ಕಾಟ ಸದನದಲ್ಲಿಯೂ ಮುಂದುವರಿದಿದೆ.