ನವದೆಹಲಿ : ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ನಾಯಕ ಅಹಮದ್ ಪಟೇಲ್ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಇಂದು ಮುಂಜಾನೆ 3.30ರ ಸುಮಾರಿನಲ್ಲಿ ಸಾವನ್ನಪ್ಪಿದ್ದಾರೆ.
ಅಹಮದ್ ಪಟೇಲ್ ಅವರಿಗೆ ಇತ್ತೀಚೆಗೆ ಕೋವಿಡ್ ಪಾಸಿಟಿವ್ ಆಗಿತ್ತು. ಇದಲ್ಲದೆ ಅವರು ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ತಿಂಗಳ ಹಿಂದೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಾಗ ಅವರನ್ನು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗುರುಗ್ರಾಮದ ಮೆದಾಂತಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ವಾರದ ಹಿಂದೆ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು. ತಿಂಗಳಿಂದ ಸಾವು ಬದುಕಿನ ನಡುವೆ ಸೆಣಸಾಡಿದ ಅಹಮದ್ ಪಟೇಲ್ ಇಂದು ಮುಂಜಾನೆ ಮೃತಪಟ್ಟಿದ್ದಾರೆ.
ಅಹಮದ್ ಪಟೇಲ್ ಸಾವಿನ ಬಗ್ಗೆ ಅವರ ಪುತ್ರ ಫೈಸಲ್ ಪಟೇಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ವಾರದ ಹಿಂದೆ ಅಹಮದ್ ಪಟೇಲ್ ಅವರ ಆರೋಗ್ಯ ತೀರಾ ಹದಗೆಟ್ಟು ವೆಂಟಿಲೇಟರ್ಗೆ ಶಿಫ್ಟ್ ಮಾಡಿದಾಗಲೂ ಫೈಸಲ್ ಪಟೇಲ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದರು.
ಅಹಮದ್ ಪಟೇಲ್ ಅವರು ಅಂದಿನ ಬಾಂಬೆ ಪ್ರಾಂತ್ಯದಲ್ಲಿದ್ದ, ಈಗ ಗುಜರಾತ್ ರಾಜ್ಯದಲ್ಲಿರುವ ಭರೂಚ್ನಲ್ಲಿ 1949ರಲ್ಲಿ ಜನಿಸಿದವರು. 1976ರಲ್ಲಿ ಭರೂಚ್ ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ ರಾಜಕಾರಣಕ್ಕೆ ಅಡಿ ಇಟ್ಟವರು. ಆ ನಂತರ ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿ ಅಧಿಕಾರದ ವಿವಿಧ ಮಜಲುಗಳನ್ನ ಕಂಡಿದ್ದರು. ಹಾಲಿ ರಾಜ್ಯಸಭಾ ಸದಸ್ಯರಾಗಿದ್ದ ಅಹಮದ್ ಪಟೇಲ್ ಒಟ್ಟು 8 ಬಾರಿ ಸಂಸದರಾಗಿದ್ದರು.
ಎಐಸಿಸಿಯ ಖಜಾಂಚಿಯೂ ಆಗಿದ್ದ ಅವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರಲ್ಲೇ ಅತ್ಯಂತ ಹೆಚ್ಚು ಪ್ರಭಾವಿ ಎನಿಸಿದ್ದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬಹಳ ವರ್ಷ ರಾಜಕೀಯ ಕಾರ್ಯದರ್ಶಿಯೂ ಆಗಿದ್ದರು. ಇದಲ್ಲದೆ ಇತರೆ ಪಕ್ಷಗಳ ಪ್ರಮುಖ ನಾಯಕರೊಂದಿಗೂ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು.
ಅಹಮದ್ ಪಟೇಲ್ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅಹ್ಮದ್ ಪಟೇಲ್ ಒಬ್ಬ ಕುಶಾಗ್ರಮತಿ ರಾಜಕಾರಣಿಯಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಪ್ರಬಲಗೊಳಿಸುವ ಕೆಲಸ ಮಾಡಿದ್ದರು ಎಂದು ಸ್ಮರಿಸಿದ್ದಾರೆ.