ನವದೆಹಲಿ : ಹೋಮ್ ಡಿಲ್ವರಿ ನೀಡೋ ಪಿಜ್ಜಾ ಡಿಲ್ವರಿ ಬಾಯ್ ಗೆ ಕೊರೊನಾ ಸೋಂಕು ಹರಡಿರೋದು ಪರೀಕ್ಷೆಯಿಂದ ದೃಢಪಟ್ಟಿದೆ. ಅದೇ ಪಿಜ್ಜಾ ಡೆಲಿವರಿ ಬಾಯ್‌ನಿಂದ ಆರ್ಡರ್ ಮಾಡಿ ತಿನಿಸು ಪಡೆದಿರುವ 72 ಕುಟುಂಬಗಳಿಗೆ ಹೋಮ್ ಕ್ವಾರಂಟೈನ್ ಆಗುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ದೆಹಲಿಯ ಮಾಳ್ವಿಯಾ ನಗರ ಪ್ರದೇಶದಲ್ಲಿರುವ ಜನಪ್ರಿಯ ಪಿಜ್ಜಾ ಪೂರೈಕೆ ಕೇಂದ್ರದಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಮೊನ್ನೆ ಮಂಗಳವಾರ ಆತನಿಗೆ ಕೊರೊನಾ ಇರೋದು ದೃಢಪಟ್ಟಿದೆ. ಕೂಡಲೇ ಪಿಜ್ಜಾ ಕೇಂದ್ರದ ಇತರೆ 16 ಮಂದಿ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಆಹಾರ ಡೆಲಿವರಿಯಾದ ದೆಹಲಿಯ ದಕ್ಷಿಣ ಜಿಲ್ಲೆಯ 72 ಕುಟುಂಬಗಳಿಗೆ ಕ್ವಾರಂಟೈನ್ ಆಗುವಂತೆ ಸೂಚಿಸಿದ್ದು, ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಎಂ.ಮಿಶ್ರಾ ತಿಳಿಸಿದ್ದಾರೆ.

ತಿಂಡಿ-ತಿನಿಸು ಡೆಲಿವರಿ ಮಾಡುವ ಎಲ್ಲರೂ ಮಾಸ್ಕ್ ಧರಿಸುವುದು ಹಾಗೂ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಕೊರೊನಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಮುನ್ನೆಚ್ಚರಿಕಾ ಕ್ರಮವಾಗಿ ಹೋಮ್ ಕ್ವಾರಂಟೈನ್ ಆಗುವುದು ಅನಿವಾರ್ಯವಾಗಿದೆ. ಸುಮಾರು 20 ದಿನಗಳಿಂದ ಆತನಲ್ಲಿ ಸೋಂಕು ಲಕ್ಷಣಗಳು ಕಂಡು ಬಂದಿರುವುದು ತಿಳಿದು ಬಂದಿತ್ತು, ಇದೀಗ ಡೆಲಿವರಿ ಬಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಜೊಮ್ಯಾಟೊ ಫುಡ್ ಡೆಲಿವರಿ ಅಪ್ಲಿಕೇಶನ್ ಮೂಲಕವೂ ಪಿಜ್ಜಾ ಕೇಂದ್ರದಿಂದ ಹಲವು ಆರ್ಡರ್ ಗಳು ಪೂರೈಕೆಯಾಗಿವೆ. ಸೋಂಕು ತಗುಲಿರುವ ಡೆಲಿವರಿ ಬಾಯ್ ಜೊತೆಗೆ ಕೆಲಸ ಮಾಡುತ್ತಿರುವ ಇತರೆ ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಲಕ್ಷಣ ಕಂಡು ಬಂದಿದೆ. ಡಿಲವೆರಿ ಬಾಯ್ ಕೆಲಸ ಮಾಡುತ್ತಿದ್ದ ರೆಸ್ಟೊರೆಂಟ್ ನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಅಂತ ಜೊಮ್ಯಾಟೊ ಹೇಳಿರುವುದಾಗಿ ನ್ಯಾಷನಲ್ ನ್ಯೂಸ್ ಚಾನಲ್ ಗಳು ವರದಿ ಮಾಡಿವೆ. ದೆಹಲಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಇದುವರೆಗೆ 30 ಮಂದಿ ಕೊರೊನಾಕ್ಕೆ ಬಲಿಯಾಗಿದ್ದು, 1,578 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.