ಚಿಕ್ಕಬಳ್ಳಾಪುರ : ಮಹಾಮಾರಿ ಕೊರೊನಾಕ್ಕೆ ರಾಜ್ಯದಲ್ಲಿ ಎರಡನೇ ಬಲಿ ಪಡೆದಿದೆ. ಚಿಕ್ಕಬಳ್ಳಾಪುರ ಗೌರಿಬಿದನೂರಿನ ಮಹಿಳೆಯ ಸಾವಿಗೆ ಕೊರೊನಾ ಕಾರಣ ಅನ್ನೋದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಮಹಿಳೆ ಮೆಕ್ಕಾಯಾತ್ರೆ ಮರಳಿ ವಾಪಾಸಾಗಿದ್ದರು. ಮಹಿಳೆ ಹಲವು ದಿನಗಳಿಂದಲೂ ಹೋಮ್ ಕ್ವಾರಂಟೈನ್ ನಲ್ಲಿದ್ದರು.

ಕಳೆದೆರಡು ದಿನಗಳ ಹಿಂದೆ ಅನಾರೋಗ್ಯ ಹೆಚ್ಚಾದಾಗ ರಾಜೀವಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ನಿನ್ನೆ ಸಾವನ್ನಪ್ಪಿದ್ದಾರೆ. ಆದರೆ ವೈದ್ಯಕೀಯ ವರದಿ ಇದೀಗ ಹೊರಬಿದ್ದಿದ್ದು, ವೃದ್ದೆಯ ಸಾವಿಗೆ ಕೊರೊನಾ ಕಾರಣ ಅನ್ನೋ ಆಘಾತಕಾರಿ ಮಾಹಿತಿ ಬಯಲಾಗಿದೆ.

ಈ ಮೂಲಕ ಕರ್ನಟಕದಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಈ ಹಿಂದೆ ಕಲಬುರಗಿಯ ವೃದ್ದ ಕೊರೊನಾಕ್ಕೆ ಬಲಿಯಾಗಿದ್ದಾರೆ. ಇದೀಗ ಕೊರೊನಾಕ್ಕೆ ರಾಜ್ಯದಲ್ಲಿ ಬಲಿಯಾಗಿರುವ ಇಬ್ಬರೂ ಕೂಡ ಇತ್ತೀಚಿಗಷ್ಟೆ ಮೆಕ್ಕಾ ಯಾತ್ರೆ ಮುಗಿಸಿ ವಾಪಾಸಾಗಿದ್ದರು. ಮಹಿಳೆಯ ಸಾವಿನ ಹಿನ್ನೆಲೆಯಲ್ಲಿ ಗೌರಬಿದನೂರಿನಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮಹಿಳೆಯ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ವೈಜ್ಞಾನಿಕವಾಗಿ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.