ಬೆಂಗಳೂರು : ಕೊರೊನಾ ವೈರಸ್ ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಬಲಿ ಪಡೆಯುತ್ತಿದ್ದಂತೆಯೇ ರಾಜ್ಯದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿಯಲ್ಲಿ ವೃದ್ದನ ಸಾವಿಗೆ ಕೊರೊನಾ ಕಾರಣ ಅನ್ನೋದು ದೃಢಪಡಿಸುತ್ತಿದ್ದಂತೆಯೇ ಕೇಂದ್ರ ಹಾಗೂ ರಾಜ್ಯ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೂ ಕೊರೊನಾ ಸೋಂಕಿನ ವಿರುದ್ದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಕಲಬುರಗಿ ವೃದ್ದನ ಸಾವಿನ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೊರೊನಾ ಸಹಾಯವಾಣಿಯನ್ನು ಆರಂಭಿಸಲಾಗಿದೆ. ಕರ್ನಾಟಕದಲ್ಲಿ 104 ಸಂಖ್ಯೆಯ ಸಹಾಯವಾಣಿಯನ್ನು ಆರಂಭಿಸಲಾಗಿದ್ರೆ, ಇತರ ರಾಜ್ಯಗಳಿಗೆ ಬೇರೆ ಬೇರೆಯಾಗಿರೋ ಸಹಾಯವಾಣಿಯನ್ನು ತೆರೆಯಲಾಗಿದೆ. ಇನ್ನು ರಾಜ್ಯ ಆರೋಗ್ಯ ಇಲಾಖೆ ಕೂಡ ಎಚ್ಚೆತ್ತುಕೊಂಡಿವೆ.

ರಾಜ್ಯ ಆರೋಗ್ಯ ಸಚಿವ ಬಿ.ಶ್ರೀರಾಮುಲು ಕಲಬುರಗಿಯಲ್ಲಿ ವೃದ್ದ ಸಾವನ್ನಪ್ಪಿರೋದಕ್ಕೆ ಕೊರೊನಾ ಕಾರಣ ಎಂದು ಟ್ವೀಟ್ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಈ ಕುರಿತು ಮಾತನಾಡಿರೊ ಶ್ರೀರಾಮುಲು ವೃದ್ದನ ಸಾವಿನ ಬೆನ್ನಲ್ಲೇ ಎಲ್ಲಾ ರೀತಿಯಲ್ಲಿಯೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಡಳಿತಗಳಿಗೆ ಮುನ್ನೆಚ್ಚರಿಕೆಯನ್ನು ಹೆಚ್ಚಿಸೋ ಕುರಿತು ಅಗತ್ಯಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ವೃದ್ದನ ಕುಟುಂಬಸ್ಥರ ಮೇಲೆ ನಿಗಾ ಇರಿಸಲಾಗಿದ್ದು, ವೃದ್ದ ಎಲ್ಲೆಲ್ಲಿ ಸಂಚರಿಸಿದ್ದಾನೆ ಅನ್ನೋ ಕುರಿತು ಮಾಹಿತಿಯನ್ನು ಕಲೆಹಾಕಲಾಗಿದೆ. ಅಲ್ಲದೇ ವೃದ್ದನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿರುವವ ವಿವರವನ್ನು ಪಡೆಯಲಾಗುತ್ತಿದೆ. ವೃದ್ದನ ಸಂಪರ್ಕದಲ್ಲಿ 43 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆತನ ಜೊತೆ ವಿಮಾನದಲ್ಲಿ ಪ್ರಯಾಣ ಮಾಡಿದ್ದವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಅಲ್ಲದೇ ವೃದ್ದ ಕಲಬುರಗಿಯಲ್ಲಿ ಎಲ್ಲೆಲ್ಲಿ ಓಡಾಡಿದ್ದಾನೆ ಅನ್ನೋ ಬಗ್ಗೆಯೂ ಮಾಹಿತಿಯಿದೆ. ಈಗಾಗಲೇ ಜಿಲ್ಲಾಡಳಿತ 43 ಮಂದಿ ಸಂಪರ್ಕದಲ್ಲಿದ್ದರು ಎನ್ನಲಾಗುತ್ತದೆ. ಆದರೆ ಈ ಸಂಖ್ಯೆ ಇನ್ನಷ್ಟು ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.