ಕಲಬುರಗಿ : ವಿಶ್ವವನ್ನೇ ನಡುಗಿಸಿರೋ ಕೊರೊನಾ ವೈರಸ್ ಇದೀಗ ರಾಜ್ಯವನ್ನು ಕಾಡುತ್ತಿದೆ. ಶಂಕಿತ ಕೊರೊನಾ ಸೋಂಕಿಗೆ ವೃದ್ದರೋರ್ವರು ಬಲಿಯಾಗಿದ್ದಾರೆ. ಮೃತಪಟ್ಟವರನ್ನು ಕಲಬುರಗಿ ನಿವಾಸಿ 76 ವರ್ಷದ ಮೊಹಮದ್ ಹುಸೇನ್ ಸಿದ್ದಿಕಿ ಎಂದು ಗುರುತಿಸಲಾಗಿದೆ. ಮೊಹಮದ್ ಹುಸೇನ್ ಸಿದ್ದಿಕಿ ಇತ್ತೀಚಿಗಷ್ಟೇ ಮೆಕ್ಕಾ, ಮದೀನ ಯಾತ್ರೆಯನ್ನು ಕೈಗೊಂಡಿದ್ದರು. ಫೆಬ್ರವರಿ 28 ರಂದು ಯಾತ್ರೆ ಮುಗಿಸಿ ತಾಯ್ನಾಡಿಗೆ ವಾಪಾಸಾಗುತ್ತಿದ್ದಂತೆಯೇ ಮೊಹಮದ್ ಹುಸೇನ್ ಸಿದ್ದಿಕಿಗೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು.

ಆರಂಭದಲ್ಲಿ ಹೆದ್ರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಆಸ್ಪತ್ರೆಯವರು ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಂತೆಯೇ ಗಿಮ್ಸ್ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಶಂಕಿತ ಕೊರೊನಾ ಹಿನ್ನೆಲೆಯಲ್ಲಿ ಗಿಮ್ಸ್ ಆಸ್ಪತ್ರೆಯ ವೈದ್ಯರು ವ್ಯಕ್ತಿಯ ಆರೋಗ್ಯ ತಪಾಸಣೆಯನ್ನು ಮಾಡಿದ್ದರು. ತಪಾಸಣೆಯ ವರದಿ ಇಂದು ಬರಲಿದೆ. ಆದರೆ ವರದಿ ಕೈಸೇರೋ ಮೊದಲೇ ವ್ಯಕ್ತ ಸಾವನ್ನಪ್ಪಿದ್ದಾರೆ. ವ್ಯಕ್ತಿ ಕೊರೊನಾ ವೈರಸ್ ನಿಂದಲೇ ಸಾವನ್ನಪ್ಪಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಆರೋಗ್ಯ ತಪಾಸಣೆಯ ವರದಿ ಕೈ ಸೇರಿದ ಬಳಿಕಷ್ಟೇ ಖಚಿತವಾಗಲಿದೆ.

ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆಯೇ ಕುಟುಂಬದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ವರದಿ ಕೈಸೇರೋ ವರೆಗೂ ಮರಣೋತ್ತರ ಕಾರ್ಯಗಳನ್ನು ನಡೆಸದಿರಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ವೃದ್ದನ ಜೊತೆಗೆ ಮೆಕ್ಕಾ ಯಾತ್ರೆಯನ್ನು ಕೈಗೊಂಡಿರೋ ಎಲ್ಲರನ್ನೂ ಇದೀಗ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ರಾಜ್ಯದಲ್ಲಿ ಶಂಕಿತ ಕೊರೊನಾಗೆ ಮೊದಲ ಬಲಿಯಾಗುತ್ತಿದ್ದಂತೆಯೇ ಆರೋಗ್ಯ ಇಲಾಖೆ ಕೂಡ ಎಚ್ಚೆತ್ತುಕೊಂಡಿದೆ.