ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಅಘೋರೇಶ್ವರ ದೇವಾಲಯ

0

ಇದು ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸೋ ಪುಣ್ಯ ಕ್ಷೇತ್ರ. ಪಶ್ಚಿಮಾಭಿಮಖವಾಗಿ ಸಾಕ್ಷಾತ್ ಶಿವನೇ ನೆಲೆಸಿರೋ ಅಘೋರೇಶ್ವರನ ಆಲಯ. ಕಾರ್ತಟ್ಟುವಿನಲ್ಲಿ ನೆಲೆಸಿರೋ ಅಘೋರೇಶ್ವರನ ಸನ್ನಿಧಿಯಲ್ಲೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ.

ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕಾರ್ತಟ್ಟು – ಚಿತ್ರಪಾಡಿಯಲ್ಲಿರೋ ಅಘೋರೇಶ್ವರನ ದೇಗುಲ ಕರಾವಳಿಯ ಪವಿತ್ರಪುಣ್ಯ ಕ್ಷೇತ್ರಗಳಲ್ಲೊಂದು. ಪರಶುರಾಮ ಸೃಷ್ಟಿಯ ಕರಾವಳಿಯಲ್ಲಿ ಪಶ್ಚಿಮಾಭಿಮುಖವಾಗಿ ಸ್ಥಾಪಿತವಾಗಿರೊ ಏಕೈಕ ಶಿವದೇವಾಲಯವೂ ಹೌದು. ಭಕ್ತರ ಪಾಲಿಗೆ ಇಷ್ಟಾರ್ಥಗಳನ್ನು ಕರುಣಿಸೋ ಅಘೋರೇಶ್ವರ ದೇವಸ್ಥಾನ ಕಾರಣೀಕವೆಂಬ ನಂಬಿಕೆ ಭಕ್ತರಲ್ಲಿದೆ. ಇದೀಗ ಅಘೋರೇಶ್ವರನ ದೇವಸ್ಥಾನದಲ್ಲಿ ಎಪ್ರಿಲ್ 6 ರಿಂದ ಎಪ್ರಿಲ್ 9 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.

ಈ ಹಿಂದೆ ಗುಡ್ಡದ ಭೂತ ಅನ್ನೋ ಧಾರವಾಹಿಯನ್ನು ಇದೇ ದೇಗುಲದ ಆವರಣದಲ್ಲಿಯೇ ಚಿತ್ರೀಕರಿಸಲಾಗಿತ್ತು. ಗಿರೀಶ್ ಕಾಸರವಳ್ಳಿ ನಿರ್ಮಾಣದ ಸದಾನಂದ ಸುವರ್ಣ ನಿರ್ದೇಶನದಲ್ಲಿ ಮೂಡಿಬಂದ ಗುಡ್ಡದ ಭೂತ, ನಟ, ನಿರ್ದೇಶಕ ಪ್ರಕಾಶ್ ರೈ ಅವರ ನಟನಾ ಬದುಕನ್ನೇ ಬದಲಾಯಿಸಿಬಿಟ್ಟಿತ್ತು.

ಧಾರವಾಹಿಯಲ್ಲಿ ಬರೋ ಕಥಾ ಸಂಚಿಕೆಯ ಮೂಲ ಬಿಂದುವೇ ಕಮರಟ್ಟು ಗ್ರಾಮದ ಭೂತದ ಮನೆ, ಭೂತದ ಮನೆಯಂತೆ ಚಿತ್ರಿತವಾಗಿದ್ದ ಗುಡಿಯೇ ಶ್ರೀಅಘೋರೇಶ್ವರನ ದೇವಸ್ಥಾನವಿರೊ ನೆಲೆವೀಡು.

ಧಾರವಾಹಿಯಲ್ಲಿ ಬರೋ ಕೆರೆಯ ದೃಶ್ಯ, ಭೂತದ ಮನೆ ಎಲ್ಲವೂ ದೇವಸ್ಥಾನಕ್ಕೆ ಸಂಬಂಧಿಸಿದ್ದು. ಗುಡ್ಡದ ಭೂತ ಧಾರವಾಹಿಯಲ್ಲಿ ಭೂತದ ಮನೆಯಂತಾಗಿದ್ದ ದೇವಸ್ಥಾನವನ್ನು ಇಂದು ಅಭಿವೃದ್ದಿ ಪಡಿಸಲಾಗಿದೆ.

ಅಘೋರೇಶ್ವರನ ಸನ್ನಿಧಿಗೆ ಕಷ್ಟವೆಂದು ಬೇಡಿ ಬರೋ ಭಕ್ತರನ್ನು ದೇವರು ಕೈಬಿಡುವುದಿಲ್ಲಾ ಅನ್ನೋ ನಂಬಿಕೆ ಭಕ್ತರಲ್ಲಿದೆ. ಅಂದು ಶಿಥಿಲಾವಸ್ಥೆಯನ್ನು ತಲುಪಿದ್ದ ದೇವಸ್ಥಾನ ಇದೀಗ ಆಡಳಿತ ಮಂಡಳಿ, ಗ್ರಾಮಸ್ಥರು, ಊರವರು ಹಾಗ ಭಕ್ತರ ನೆರವಿನೊಂದಿಗೆ ಇಂದು ಪುಣ್ಯಕ್ಷೇತ್ರವಾಗಿ ನೆಲೆನಿಂತಿದೆ.

ಜೈನರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಅಘೋರೇಶ್ವರನ ದೇಗುಲ ಸಂಪೂರ್ಣವಾಗಿ ಶಿಥಿಲವಾದಾಗ ಊರ – ಪರವೂರ ಭಕ್ತರ ನೆರವಿನೊಂದಿಗೆ 2000ನೇ ಇಸವಿಯಲ್ಲಿ ಗರ್ಭಗುಡಿ, ತೀರ್ಥಮಂಟಪ, ಎದುರಿನ ಹೆಬ್ಬಾಗಿಲು, ನೆಲಹಾಸು ಸೇರಿದಂತೆ ದೇವಳವನ್ನು ಸಂಪೂರ್ಣವಾಗಿ ಜೀರ್ಣೋದ್ದಾರಗೊಳಿಸಲಾಗಿತ್ತು.

ಕಾರಣೀಕವೆನಿಸಿರೋ ಅಘೋರೇಶ್ವರನ ಸನ್ನಿಧಿಯಲ್ಲಿ ಪ್ರಸ್ತುತ ದೇವಳದ ಮೊಕ್ತೇಸರಾದ ಶ್ರೀ ಚಂದ್ರಶೇಖರ ಕಾರಂತರ ನೇತೃತ್ವದಲ್ಲಿ ಆಡಳಿತ ಮಂಡಳಿ ಹಲವಾರು ಅಭಿವೃದ್ಧಿ ಕಾರ್ಯ ನೆರವೇರಿಸುತ್ತಿದೆ

ಪ್ರತೀ ವರ್ಷದ ಶಿವರಾತ್ರಿಯಂದು ರುದ್ರಹೋಮ, ಸೋಣೆಆರತಿ, ರಂಗಪೂಜೆ ಹಾಗೂ ದೀಪೋತ್ಸವ ಕಾರ್ಯಕ್ರಮಗಳು ಅನವರತವಾಗಿ ನೆರವೇರುತ್ತಿದೆ.

ಶ್ರೀ ದೇವರ ಅಷ್ಟಬಂಧ ಶಿಥಿಲಗೊಂಡಿದ್ದರಿಂದ ಅಷ್ಟಬಂಧ ಮತ್ತು ಬ್ರಹ್ಮಕಲಶೋತ್ಸವ ಕಾರ್ಯವನ್ನು ಈ ಬಾರಿ ಹಮ್ಮಿಕೊಳ್ಳಲಾಗಿದೆ. ಶ್ರೀ ಕಿದಿಯೂರು ಉದಯಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಿದ್ದು, ಬ್ರಹ್ಮಕಲಶೋತ್ಸವ ಮತ್ತು ಸಾಂಸ್ಕೃತಿಕ ಹಬ್ಬ ಸಾಂಗವಾಗಿ ನೆರವೇರಿಸಬೇಕೆಂಬ ಪಣ ತೊಟ್ಟಿರುತ್ತಾರೆ.

ಬ್ರಹ್ಮಕಶೋತ್ಸವದ ಸಂಭ್ರಮದಲ್ಲಿ ದೇವಸ್ಥಾನದ ಆಕರ್ಷಣೆ ಮತ್ತು ಸುಂದರತೆಯನ್ನು ಹೆಚ್ಚಿಸೋ ನಿಟ್ಟಿನಲ್ಲಿ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಸುತ್ತುಪೌಳಿಯ ಮೇಲೆ ಹಾಗೂ ಗರ್ಭಗುಡಿಯನ್ನು ಸುತ್ತುವರಿದು ತಗಡಿನ ಚಪ್ಪರ, ದೇವಸ್ಥಾನದ ಕಟ್ಟಡಗಳಿಗೆ ಬಣ್ಣದ ಲೇಪನ ಹಾಗೂ ಹೊರ ಹಾಸು ಸೇರಿದಂತೆ ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ದೇವಸ್ಥಾನದಲ್ಲಿ ನೆರವೇರಲಿರೋ ಪುಣ್ಯ ಕಾರ್ಯದಲ್ಲಿ ಭಕ್ತರು ತನು, ಮನ, ಧನ ಸಹಾಯ ಮಾಡುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.

ನಿರೂಪಣೆ: ಆರ್.ಕೆ. ಬ್ರಹ್ಮಾವರ 

Leave A Reply

Your email address will not be published.