ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ವಾರಗಳ ಕಾಲ ರಜೆ ಘೋಷಿಸಿದ್ದಾರೆ. ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಒಂದು ವಾರಗಳ ಕಾಲ ರಾಜ್ಯ ಸಂಪೂರ್ಣವಾಗಿ ಸ್ತಬ್ದವಾಗಲಿದೆ. ಅಷ್ಟಕ್ಕೂ ರಾಜ್ಯದಲ್ಲಿ ಸರಕಾರ ರಜೆ ಘೋಷಿಸಿರೋದ್ರ ಹಿಂದಿದೆ ಭಯಾನಕ ಸತ್ಯ.

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಕಲಬುರಗಿಯಲ್ಲಿ ವೃದ್ದನೋರ್ವ ಸಾವನ್ನಪ್ಪಿದ್ದ. ಅಲ್ಲದೇ 6 ಮಂದಿಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಮಾತ್ರವಲ್ಲ ಇನ್ನಷ್ಟು ಮಂದಿ ಶಂಕಿತ ಕೊರೊನಾದಿಂದ ಬಳಲುತ್ತಿದ್ದಾರೆ. ಆದರೆ ಕಲಬುರಗಿಯಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿರೋ ವೃದ್ದನ ವಿಚಾರದಲ್ಲಿ ಆರೋಗ್ಯ ಇಲಾಖೆ ಹಾಗೂ ಸರಕಾರ ಮಾಡಿಕೊಂಡಿರೋ ಎಡವಟ್ಟು ಇಂದು ರಾಜ್ಯಕ್ಕೆ ಆತಂಕವನ್ನು ತಂದೊಡ್ಡಿದೆ.

ಉಮ್ರಾಕ್ಕೆ ತೆರಳಿದ್ದ ವೃದ್ದನಿಗೆ ಶಂಕಿತ ಕೊರೊನಾ ಪತ್ತೆಯಾಗಿತ್ತು. ಆತನನ್ನು ಕಲಬುರಗಿ ಆಸ್ಪತ್ರೆಯಿಂದ ಹೈದ್ರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಶಂಕೆ ವ್ಯಕ್ತವಾಗಿದ್ದರೂ ಕೂಡ ಕಲಬುರಗಿ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿರಲಿಲ್ಲ. ಮೆಕ್ಕಾ ಯಾತ್ರೆ ಮುಗಿಸಿ ಬಂದಿದ್ದ ವೃದ್ದನ ಕಾಲಿಗೆ ನೂರಾರು ಮಂದಿ ಬಿದ್ದು, ಆಶೀರ್ವಾದವನ್ನು ಪಡೆದುಕೊಂಡಿದ್ರು.

ಅಲ್ಲದೇ ಹೈದ್ರಾಬಾದ್ ಆಸ್ಪತ್ರೆ ಹಾಗೂ ಕಲಬುರಗಿ ಆಸ್ಪತ್ರೆಯಲ್ಲಿ ವೃದ್ದ ಚಿಕಿತ್ಸೆ ಪಡೆಯುವಾಗಲೂ ನೂರಾರು ಮಂದಿ ಆರೋಗ್ಯ ವಿಚಾರಿಸಿದ್ದಾರೆ. ಇದೆಲ್ಲಾ ಆದ ನಂತರದ ವೃದ್ದ ಸಾವನ್ನಪ್ಪಿದ್ದ. ಆದ್ರೆ ಸಾವಿನ ವಿಚಾರದಲ್ಲಿಯೂ ಆರೋಗ್ಯ ಇಲಾಖೆ ಅಗತ್ಯಕ್ರಮಗಳನ್ನು ಕೈಗೊಂಡಿಲ್ಲ. ಕೊರೊನಾ ಸೋಂಕು ತಗುಲಿದ್ರೂ ವೃದ್ದನನ್ನು ಮುನ್ನೆಚ್ಚರಿಕೆ ವಹಿಸದೆಯೇ ಅಂತ್ಯಕ್ರೀಯೆ ನಡೆಸಲಾಗಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇನ್ನೊಂದೆಡೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರು ಕಲಬುರಗಿ ವೃದ್ದನ ಸಾವಿಗೆ ಕೊರೊನಾ ಕಾರಣ ಅನ್ನೋ ಸುದ್ದಿ ಬಿತ್ತರಿಸಿದ್ದರೂ ಕೂಡ, ಕೊರೊನಾ ಇಲ್ಲಾ ಅಂತಾನೇ ಹೇಳಿಕೆ ನೀಡಿದ್ದರು. ಆದ್ರೀಗ ಆರೋಗ್ಯ ತಪಾಸಣೆಯ ವರದಿ ಬರುತ್ತಿದ್ದಂತೆಯೇ ಸರಕಾರ ಬೆಚ್ಚಿಬಿದ್ದಿದೆ.

ಕಲಬುರಗಿಯಲ್ಲಿ ನೂರಾರು ಸಂಖ್ಯೆಯಲ್ಲಿ ವೃದ್ದನನ್ನು ಸ್ಪರ್ಶಿಸಿರೋದ್ರಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕಕ್ಕೆ ಒಳಗಾಗಿದ್ದಾರೆ. ಆರಂಭದಲ್ಲಿ ಒಂದು ವಾರಗಳ ಕಾಲ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡೋದಕ್ಕೆ ಸಿಎಂ ಯಡಿಯೂರಪ್ಪ ಒಪ್ಪಿಗೆಯನ್ನು ಸೂಚಿಸಿರಲಿಲ್ಲ. ಆದರೆ ಆರೋಗ್ಯ ಇಲಾಖೆಯ ಅಧಿಕಾರಿಗಳು ವೃದ್ದನ ಆಶೀರ್ವಾದ ಪಡೆದಿರೋ ವಿಚಾರ ತಿಳಿಸುತ್ತಿದ್ದಂತೆಯೇ ರಜೆ ಘೋಷಿಸಿದ್ದಾರೆ.

ರಾಜ್ಯ ಸರಕಾರ ಕೊನೆಗೂ ತಡವಾಗಿಯೇ ಎಚ್ಚೆತ್ತುಕೊಂಡಿದೆ. ಶಾಲೆಗಳು, ಕಾಲೇಜುಗಳಿಗೆ ರಜೆಯನ್ನು ಘೋಷಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು ಸೇರಿದಂತೆ 100 ಜನರನ್ನು ಮೀರಿದ ಎಲ್ಲಾ ಸಮಾರಂಭಗಳಿಗೂ ಬ್ರೇಕ್ ಹಾಕಿದೆ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿದ್ರೆ ಇನ್ನಷ್ಟು ದಿನಗಳ ಕಾಲ ರಜೆ ಮುಂದುವರಿಯೋ ಸಾಧ್ಯತೆಯಿದೆ.