ಕುವೈತ್ : ಗಲ್ಪ್ ರಾಷ್ಟ್ರ ಕುವೈತ್ ಕೊರೊನಾ ವೈರಸ್ ಭೀತಿಯಿಂದ ನಲುಗಿ ಹೋಗಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರೋದ್ರಿಂದ ಕುವೈತ್ ನಿವಾಸಿಗಳಿಗೆ ವಿದೇಶಿ ಪ್ರಯಾಣಕ್ಕೆ ನಿರ್ಬಂಧ ಹೇರಲಾಗಿದೆ. ಶಾಲಾ, ಕಾಲೇಜುಗಳಿಗೆ ಅನಿರ್ಧಿಷ್ಠಾವಧಿಯ ವರೆಗೆ ರಜೆ ಘೋಷಿಸಲಾಗಿದ್ದು, ಸಾರ್ವಜನಿಕವಾಗಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಈ ಕುರಿತು ನ್ಯೂಸ್ ನೆಕ್ಸ್ಟ್ EXCLUSIVE ವರದಿ ಇಲ್ಲಿದೆ.

ಚೀನಾದಲ್ಲಿ ಮರಣ ಮೃದಂಗವನ್ನೇ ಬಾರಿಸಿದ್ದ ಕೊರೊನಾ ವೈರಸ್ ಇದೀಗ ಕುವೈತ್ ನಿವಾಸಿಗಳನ್ನು ತತ್ತರಿಸಿ ಹೋಗುವಂತೆ ಮಾಡುತ್ತಿದೆ. ಇರಾನ್ ದೇಶದಿಂದ ಕುವೈತ್ ಗೆ ಮರಳಿದ್ದ ಮೂವರಿಗೆ ಆರಂಭದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಆದ್ರೀಗ ಕುವೈತ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿತರನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಕುವೈತ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈಗಾಗಲೇ ಶಾಲಾ, ಕಾಲೇಜುಗಳಿಗೆ ಅನಿರ್ಧಿಷ್ಟಾವಧಿಗೆ ರಜೆಯನ್ನು ಘೋಷಿಸಲಾಗಿದೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡಂತೆ ನಿಷೇಧ ಹೇರಲಾಗಿದೆ.

ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದಾಗಿ ತನ್ನ ನಿವಾಸಿಗಳು ಕಡ್ಡಾಯವಾಗಿ ಮಾಸ್ಕ್ಗ್ ಧರಿಸುವಂತೆ ಕಟ್ಟೆಚ್ಚರವನ್ನು ವಹಿಸಿದೆ. ಹೀಗಾಗಿ ಹೋಟೆಲ್, ಮಾಲ್, ರೆಸ್ಟೋರೆಂಟ್, ಕಾಫಿಶಾಪ್, ಥಿಯೇಟರ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸಿಬ್ಬಂಧಿಗಳು ಮಾಸ್ಕ್ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುವೈತ್ ನಲ್ಲಿ ಮಾಸ್ಕ್ ಕೊರತೆ ಎದುರಾಗಿರೋದ್ರಿಂದಾಗಿ ಈಗಾಗಲೇ 1 ಕೋಟಿ ಮಾಸ್ಕ್ ಗಳನ್ನು ಪೂರೈಕೆ ಮಾಡುವಂತೆ ಕುವೈತ್ ಸರಕಾರ ತನ್ನ ಸರಬರಾಜುದಾರರಿಗೆ ವಿನಂತಿಸಿಕೊಂಡಿದೆ.

ಇನ್ನು ವಿಮಾನ ನಿಲ್ದಾಣದಲ್ಲಿ ಕುವೈತ್ ಗೆ ಮರಳೋ ಎಲ್ಲಾ ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ವೈರಸ್ ಎಲ್ಲೆಡೆ ಹರಡೋ ಭೀತಿಯಿಂದಲೇ ಕುವೈತ್ ದೇಶದಲ್ಲಿ ನೆಲೆಸಿರುವವರು ಯಾವುದೇ ದೇಶಕ್ಕೆ ಪ್ರಯಾಣ ಬೆಳೆಸದಂತೆ ಮನವಿ ಮಾಡಿಕೊಂಡಿದೆ. ಅಲ್ಲದೇ ವಿದೇಶಗಳಲ್ಲಿ ನೆಲೆಸಿರೊ ಸುಮಾರು 500ಕ್ಕೂ ಅಧಿಕ ಕುವೈತ್ ಪ್ರಜೆಗಳನ್ನು ಈಗಾಗಲೇ ವಿಶೇಷ ವಿಮಾನಗಳ ಮೂಲಕ ಸ್ವದೇಶಕ್ಕೆ ಈಗಾಗಲೇ ಕರೆಯಿಸಿಕೊಂಡಿದೆ. ಜನರು ಗುಂಪು ಗೂಡುವುದರಿಂದ ಕೊರೊನಾ ವೈರಸ್ ಸೋಂಕು ಬಹುಬೇಗ ಹರಡುವ ಭೀತಿಯಿಂದ ಚರ್ಚ್ ಗಳಲ್ಲಿ ಸಾರ್ವಜನಿಕವಾಗಿ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ. ಕುವೈತ್ ನ ವಾಣಿಜ್ಯ ಶೇರು ಮಾರುಕಟ್ಟೆಯ ಮುಖ್ಯದ್ವಾರವನ್ನೇ ಬಂದ್ ಮಾಡಲಾಗಿದ್ದು, ಎಲ್ಲೆಡೆ ಹದ್ದಿಕಣ್ಣು ಇರಿಸಲಾಗಿದೆ.

ಭಾರತೀಯರಲ್ಲಿ ಆತಂಕ !
ಸುಮಾರು 17,820 ಚದರ ಕಿಲೋ ಮೀಟರ್ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿರೋ ಕುವೈತ್ ದೇಶದಲ್ಲಿ ಒಟ್ಟು 42,45,769 ಮಂದಿ ನಿವಾಸಿಗಳಿದ್ದಾರೆ. ಈ ಪೈಕಿ 8,25,000 ಮಂದಿ ಭಾರತೀಯರು ಕುವೈತ್ ನಲ್ಲಿ ನೆಲೆಸಿದ್ದಾರೆ. ಎಲ್ಲಾ ದೇಶಗಳಿಗಿಂತಲೂ ಭಾರತೀಯರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರೋದ್ರಿಂದಾಗಿ ಇದೀಗ ಕೊರೊನಾ ವೈರಸ್ ಭೀತಿ ಭಾರತೀಯರನ್ನು ಕಾಡುತ್ತಿದೆ. ಕುವೈತ್ ಆರೋಗ್ಯ ಸಚಿವಾಲಯ ಯಾವುದೇ ಕಾರಣಕ್ಕೂ ಕುವೈತ್ ಬಿಟ್ಟು ಯಾವುದೇ ದೇಶಕ್ಕೂ ತೆರಳದಂತೆ ಸೂಚಿಸಲಾಗಿದೆ. ಗಲ್ಪ್ ಡೈಲಿ ನ್ಯೂಸ್ ಭಾರತದಿಂದ ಕುವೈತ್ ಗೆ ತೆರಳೋ ಎಲ್ಲಾ ವಿಮಾನಗಳಿಗೆ ನಿಷೇಧ ಹೇರುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.

ಹೀಗಾಗಿ ವಿಮಾನ ಯಾನ ಸಂಪರ್ಕ ಕಡಿತವಾಗೋ ಆತಂಕದಲ್ಲಿ ಭಾರತೀಯರಿದ್ದಾರೆ. ಆದರೆ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಇನ್ನೂ ಭಾರತೀಯ ಪ್ರಜೆಗಳಿಗೆ ಮಾಹಿತಿಯನ್ನು ನೀಡೋ ಕೆಲಸವನ್ನು ಮಾಡಿಲ್ಲ. ಒಟ್ಟಿನಲ್ಲಿ ಕುವೈತ್ ದೇಶದಲ್ಲಿ ದಿನೇ ದಿನೇ ಕೊರೊನಾ ವೈರಸ್ ಭೀತಿ ಜನರ ನಿದ್ದೆಗೆಡಿಸಿದೆ.
ಕೊರೊನಾ ಭೀತಿಯಿಂದ ಕುವೈತ್ ನಲ್ಲಿ ಏನೇನಾಗ್ತಿದೆ… ಅನ್ನೋ ಮಾಹಿತಿಗೆ ನ್ಯೂಸ್ ನೆಕ್ಸ್ಟ್ facebook page follow ಮಾಡಿ
