ಕಲಬುರಗಿ : ಕೊರೊನಾ ವೈರಸ್ ಮಹಾಮಾರಿ ಕರ್ನಾಟಕ ರಾಜ್ಯದಲ್ಲಿ ಮೊದಲ ಬಲಿ ಪಡೆದಿದೆ. ಕಲಬುರಗಿಯಲ್ಲಿ ಸಾವನ್ನಪ್ಪಿದ್ದ ವೃದ್ದ ಕೊರೊನಾ ವೈರಸ್ ಸೋಂಕಿನಿಂದಲೇ ಅನ್ನೋದನ್ನು ವೈದ್ಯಕೀಯ ವರದಿಯಿಂದ ಬಯಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಕಲಬುರಗಿಯ 76 ವರ್ಷದ ವೃದ್ದರೋರ್ವರು ಮೆಕ್ಕಾ ಯಾತ್ರೆಗೆ ತೆರಳಿ ಫೆಬ್ರವರಿ 28ರಂದು ಕಲಬುರಗಿಗೆ ಹಿಂದಿರುಗಿದ್ದರು. ಆದರೆ ಜ್ವರ, ಕೆಮ್ಮ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ವೃದ್ದನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 10 ರಂದು ವೃದ್ದ ಸಾವನ್ನಪ್ಪಿದ್ದ. ವೃದ್ದನ ಸಾವಿಗೆ ಕೊರೊನಾ ಸೋಂಕು ಕಾರಣ ಅನ್ನೋ ಮಾತು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಾಧಿಕಾರಿಗಳ ವೃದ್ದನ ರಕ್ತ ಹಾಗೂ ಕಫದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ವೃದ್ದನ ಸಾವಿಗೆ ಕಿಲ್ಲರ್ ಕೊರೊನಾ ಕಾರಣ ಅನ್ನೋದು ದೃಢಪಟ್ಟಿದೆ. ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ.ಸ್ಪಷ್ಟನೆ ನೀಡಿದ್ದಾರೆ. ವೃದ್ದನ ಸಾವಿಗೆ ಕೊರೊನಾ ಕಾರಣ ಅನ್ನೋ ವರದಿ ಬಂದಿರೋ ಹಿನ್ನೆಲೆಯಲ್ಲಿ ವೃದ್ದನ ಕುಟುಂಬಸ್ಥರ ಮೇಲೆ ನಿಗಾವಹಿಸಲಾಗುತ್ತಿದ್ದು, ಆರೋಗ್ಯ ಇಲಾಖೆಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.