ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಗೆ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಹೀಗಾಗಿ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 5 ಕ್ಕಿಂತ ಕಡಿಮೆ ಹಾಗೂ ಸಾವಿನ ಪ್ರಮಾಣ ಶೇಕಡಾ 1ಕ್ಕಿಂತ ಕಡಿಮೆಯಾಗುವರೆಗೂ ಲಾಕ್ ಡೌನ್ ಸೂಕ್ತ ಎಂದು ತಜ್ಞರ ಸಮಿತಿ ಸಲಹೆ ನೀಡಿದೆ.

ಈಗ ರಾಜ್ಯ ಸರ್ಕಾರ ಹಲವು ನಿಯಮಾವಳಿಗಳ ಜೊತೆ ವಿಧಿಸಿರುವ ಸೆಮಿ ಲಾಕ್ ಡೌನ್ ಜೂನ್ 7 ಕ್ಕೆ ಕೊನೆಯಾಗಲಿದೆ. ಈ ನಿಟ್ಟಿನಲ್ಲಿ ಭಾನುವಾರ ಸಭೆ ನಡೆಸಿದ ತಜ್ಞರ ಸಮಿತಿ ಸೋಮವಾರ ಸರ್ಕಾರಕ್ಕೆ ಹಲವು ಅಂಶಗಳನ್ನು ಒಳಗೊಂಡ ವರದಿ ನೀಡಿದೆ.

ಸೋಮವಾರ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ 13.57 ರಷ್ಟಿದ್ದರೇ, ಮರಣ ಪ್ರಮಾಣ ಶೇಕಡಾ 2.47 ರಷ್ಟಿದೆ. ಈ ಪ್ರಮಾಣ ಶೇಕಡಾ 5 ಮತ್ತು 1 ಕ್ಕಿಂತ ಕಡಿಮೆ ಬರುವರೆಗೂ ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹೇಳಿದೆ.

14 ತಜ್ಞರ ಸಮಿತಿ ರಾಜ್ಯದ ಪಾಸಿಟಿವಿಟಿ ಪ್ರಮಾಣ, ಸಾವು-ನೋವಿನ ಸಂಖ್ಯೆ, ಸಧ್ಯದ ಸ್ಥಿತಿ,ಲಾಕ್ ಡೌನ್ ಬಳಿಕ ಆದ ಬದಲಾವಣೆ ಎಲ್ಲವನ್ನು ಪರಿಶೀಲಿಸಿ ವರದಿ ಸಲ್ಲಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ತಜ್ಞರು, ಯಾವ ರೀತಿ ಲಾಕ್ ಡೌನ್ ಮುಂದುವರಿಸಬೇಕೆಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ ಜೂನ್ 7 ಕ್ಕೆ ಲಾಕ್ ಡೌನ್ ಕೊನೆಗೊಳ್ಳುವ ವೇಳೆಗೆ ಪಾಸಿಟಿವಿಟಿ ರೇಟ್ ಶೇಕಡಾ 5 ಕ್ಕಿಂತ ಕಡಿಮೆಯಾಗುವುದು ಅನುಮಾನ. ಹೀಗಾಗಿ ಸರ್ಕಾರ ಇನ್ನು ಕನಿಷ್ಠ 2 ವಾರಗಳ ಕಾಲ ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದಿದೆ.

ಹೀಗಾಗಿ ಲಾಕ್ ಡೌನ್ ಭವಿಷ್ಯ ಸದ್ಯ ಸಿಎಂ ಬಿಎಸ್ವೈ ಅಂಗಳದಲ್ಲಿದ್ದು, ಜೂನ್ 6 ರಂದು ಸಭೆ ನಡೆಸಿ ಸಿಎಂ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎನ್ನಲಾಗುತ್ತಿದೆ.