ಮಂಗಳೂರು : ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ವ್ಯಾಪಿಸುತ್ತಲೇ ಇದೆ. ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿತ್ತು. ಆದರೆ ಕೊರೊನಾ ಸೋಂಕು ತಡೆಯಬೇಕಾಗಿದ್ದ ಸಭೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಾಗೂ ಉಳ್ಳಾಲ ಶಾಸಕ ಯು.ಟಿ.ಖಾದರ್ ಅವರ ಮಾತಿನ ಚಕಮಕಿಯಲ್ಲಿಯೇ ಅಂತ್ಯಕಂಡಿದೆ. ಶಾಸಕರ ಟಾಕ್ ವಾರ್ ಗೆ ಜಿಲ್ಲೆಯ ಅಧಿಕಾರಿಗಳು ಮಾತ್ರ ಕಂಗಲಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಇದೀಗ ಮಂಗಳೂರು ನಗರಕ್ಕೂ ಕೊರೊನಾ ಸೋಂಕು ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಆರಂಭವಾಗುತ್ತಿದ್ದಂತೆಯೇ ಕೊರೊನಾ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ಆರಂಭವಾಗಿತ್ತು.

ಆದರೆ ಶಾಸಕ ವೇದವ್ಯಾಸ ಕಾಮತ್ ಅವರು ಶಾಸಕ ಯು.ಟಿ.ಖಾದರ್ ಅವರು ಜನರನ್ನು ಇತರ ಜಿಲ್ಲೆಗಳಿಂದ ಸಾಗಿಸುತ್ತಿದ್ದಾರೆ ಅಂತಾ ಆರೋಪಿಸಿದ್ದಾರೆ. ಇದರಿಂದ ಕೆರಳಿದ ಶಾಸಕ ಯು.ಟಿ.ಖಾದರ್ ಕೂಡ ಬಿಜೆಪಿ ಶಾಸಕರು ಕೂಡ ಜನರನ್ನು ಜಿಲ್ಲೆಯ ಇತರೆಡೆಗಳಿಗೆ ಸಾಗಾಟ ಮಾಡುತ್ತಿದ್ದಾರೆನ್ನುವ ಪ್ರತ್ಯಾರೋಪ ಮಾಡಿದ್ದಾರೆ. ಅಲ್ಲದೇ ಜಿಲ್ಲೆಯ ಬಿಜೆಪಿ ಶಾಸಕರು ಪಚ್ಚನಾಡಿಯಲ್ಲಿ ಕೊರೊನಾ ಸೋಂಕಿತ ಮಹಿಳೆಯ ಅಂತ್ಯಕ್ರೀಯೆ ನಡೆಸಲು ವಿರೋಧ ಮಾಡಿದ್ದಾರೆ. ಇದು ಎಷ್ಟು ಸರಿ ಅಂತಾ ಪ್ರಶ್ನಿಸಿದ್ದಾರೆ.

ಯು.ಟಿ.ಖಾದರ್ ಅವರಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೂಡ ಧ್ವನಿ ಗೂಡಿಸಿದ್ದಾರೆ. ವೇದವ್ಯಾಸ ಕಾಮತ್ ಅವರು ಇಟಲಿಯಿಂದ ಬಂದವರನ್ನು ನಮ್ಮ ಜಿಲ್ಲೆಗೆ ಕರೆತರುವ ಉದ್ದೇಶವೇನಿದೆ ? ಅಲ್ಲದೇ ಯು.ಟಿ.ಖಾದರ್ ಅವರ ಇನ್ನೊಂದು ಕಾರು ನಿತ್ಯವೂ ಪಡುಬಿದ್ರಿ ಮುಂತಾದ ಕಡೆಗಳಿಗೆ ಜನರನ್ನು ಸಾಗಿಸುತ್ತಿದೆ ಅಂತಾ ಆರೋಪಿಸಿದರು. ಇಬ್ಬರು ಶಾಸಕರ ನಡುವಿನ ಮಾತಿನ ಸಮರಕ್ಕೆ ಇಡೀ ಸಭೆ ಬಲಿಯಾಗಿ ಹೋಗಿದೆ.

ಶಾಸಕರು ಪರಸ್ಪರ ಮಾತಿನ ಚಕಮಕಿ ನಡೆಸುತ್ತಿದ್ರೆ ಅಧಿಕಾರಿಗಳು ಮಾತ್ರ ಮೂಖಪ್ರೇಕ್ಷಕರಾಗಿದ್ದರು. ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ವ್ಯಾಪಿಸುತ್ತಿರುವುದನ್ನು ತಡೆಯಬೇಕಾಗಿರೋ ಜನಪ್ರತಿನಿಧಿಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಹೀಗೆ ವರ್ತಿಸುವುದು ಎಷ್ಟು ಸರಿ ಅಂತಾ ಜನರು ಪ್ರಶ್ನಿಸುತ್ತಿದ್ದಾರೆ.