ನವದೆಹಲಿ : ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿ. ಕೊರೊನಾ ವೈರಸ್ ಸೋಂಕನ್ನೇ ಬಂಡವಾಳವನ್ನಾಗಿಸಿಕೊಂಡ ಮಹಿಳೆಯೊಬ್ಬಳು ತನ್ನ ಗಂಡನನ್ನು ಸ್ನೇಹಿತನ ನೆರವಿನಿಂದ ಹತ್ಯೆ ಮಾಡಿದ್ದಾಳೆ. ನಂತರ ತನ್ನ ಗಂಡ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟಿರುವುದಾಗಿ “ಕಥೆ” ಕಟ್ಟಿದ್ದಾಳೆ. ಆದ್ರೆ ಕೊನೆಗೂ ಮಹಿಳೆಯ ನಿಜಬಣ್ಣ ಬಯಲಾಗಿದೆ.

ವಾಯುವ್ಯ ದೆಹಲಿಯ ಅಶೋಕ್ ವಿಹಾರ್ ನಲ್ಲಿ ನಿವಾಸಿಯಾಗಿರುವ ಶರತ್ ದಾಸ್ (46) ಎಂಬವರೇ ಹತ್ಯೆಯಾಗಿರುವ ನತದೃಷ್ಟ. ಶರತ್ ದಾಸ್ ಪತ್ನಿ ಅನಿತಾ ಎಂಬಾಕೆಯೇ ಈ ಕೃತ್ಯ ಎಸಗಿದವಳು. ಅಶೋಕ್ ವಿಹಾರ್ ಪ್ರದೇಶದಲ್ಲಿ ಅಂಗಡಿಯನ್ನು ನಡೆಸುತ್ತಿದ್ದ ಶರತ್ ಮೇ 2 ರಂದು ಕೋವಿಡ್ -19 ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅನಿತಾ ನೆರೆಮನೆಯಾಕೆಗೆ ತಿಳಿಸಿದ್ದಾಳೆ.

ಆ ನಂತರ ನೆರೆಹೊರೆಯವರು ಈ ತಮ್ಮ ಪ್ರದೇಶದಲ್ಲಿ ಕೋವಿಡ್ ಸಾವು ನಡೆದಿದ್ದನ್ನು ಪೋಲೀಸರಿಗೆ ಹೇಳಿದ್ದಾರೆ. ಆದರೆ ಪೋಲೀಸರು ಆಗಮಿಸಿ ಪರಿಶೀಲಿಸುವಾಗ ಅನಿತಾಗೆ ತನ್ನ ಪತಿ ಶರತ್ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿರುವ ಬಗ್ಗೆ ಯಾವ ದಾಖಲೆ ನೀಡಲು ಸಾಧ್ಯವಾಗಿಲ್ಲ. ನಿಜಕ್ಕೂ ಶರತ್ ಸಾವಿಗೆ ಮುನ್ನ ಆರೋಗ್ಯವಾಗಿದ್ದ ಎಂದು ಅಕ್ಕಪಕ್ಕದ ಮನೆಗಳ ನಿವಾಸಿಗಳು ಪೋಲೀಸರಿಗೆ ವಿವರಿಸಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿ ಒಂದೆರಡು ದಿನಗಳ ನಂತರ ವೈದ್ಯರು ತಮ್ಮ ವರದಿ ಕೊಟ್ಟಿದ್ದು ಶರತ್ ನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಪೋಲೀಸರು ಪತ್ನಿ ಅನಿತಾಳನ್ನು ಪ್ರಶ್ನಿಸಿದಾಗ ಆಕೆ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ತಾನು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದ ಕಾರಣ ನಮ್ಮಿಬ್ಬರ ಪ್ರೀತಿಗೆ ಅಡ್ಡಿಯಾಗಿದ್ದ ಶರತ್ ನನ್ನು ಮುಗಿಸಲು ನಿರ್ಧರಿಸಿದ್ದಾಗಿ ಅನಿತಾ ಹೇಳಿದ್ದಾಳೆ.

ಮೇ 1ರ ರಾತ್ರಿ ಪತಿ ನಿದ್ರಿಸಿದ ನಂತರ ತನ್ನ ಪ್ರೇಮಿಯನ್ನು ಕರೆದ ಅನಿತಾ ಆತನೊಂದಿಗೆ ಸೇರಿ ಶರತ್ ನನ್ನು ಹತ್ಯೆ ಮಾಡಿದ್ದಾಳೆ. ಕೃತ್ಯ ನಡೆಸಿದ ನಂತರ ಶವವನ್ನು ಸುಟ್ಟು ಹಾಕಲು ಯೋಜಿಸಿದ್ದರು ಎನ್ನಲಾಗಿದೆ. ಕೊನೆಗೆ ಆರೋಪಿಗಳನ್ನು ಬಂಧಿಸಿರೋ ಪೊಲೀಸರು ಶ್ರೀಕೃಷ್ಣನ ಜನ್ಮಸ್ಥಾನವನ್ನು ಸೇರಿಸಿದ್ದಾರೆ.