ಡಿಕೆಶಿ ಪದೇ ಪದೇ ಸಾಮಾಜಿಕ ಜಾಲತಾಣ ಸಭೆ ನಡೆಸುತ್ತಿರೋದ್ರ ಹಿಂದಿನ ಮರ್ಮವೇನು : ಬಿಜೆಪಿ ವಿರುದ್ದ ಯಶಸ್ವಿಯಾಗುತ್ತಾರಾ ಟ್ರಬಲ್ ಶೂಟರ್ ?

0

ಬೆಂಗಳೂರು : ರಾಜಕೀಯ ಪಕ್ಷಗಳು ಸೋಶಿಯಲ್ ಮೀಡಿಯಾಗಳತ್ತ ವಾಲುತ್ತಿರೋದು ಹೊಸತೇನಲ್ಲಾ. ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕೂಡ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕಕ್ಕೆ ಇನ್ನಿಲ್ಲದ ಒತ್ತು ನೀಡಿದ್ದಾರೆ. ಆದ್ರೆ ಘಟಕಕ್ಕೆ ನೇಮಕಾತಿ ಮಾಡಿಕೊಳ್ಳುವಲ್ಲಿ ಡಿಕೆಶಿ ಎಡವಿದ್ರಾ ಅನ್ನೋ ಕುರಿತು ಚರ್ಚೆ ನಡೆಯುತ್ತಿದೆ. ಆದ್ರೆ ಬಿಜೆಪಿಯನ್ನು ಮಣಿಸೋದಕ್ಕೆ ಹಠತೊಟ್ಟಿರೋ ಸದಾ ಸಾಮಾಜಿಕ ಜಾಲತಾಣದ ಕುರಿತು ವಿಡಿಯೋ ಕಾನ್ಪರೆನ್ಸ್ ಸಭೆ ನಡೆಸುತ್ತಿದ್ದಾರೆ.

ಕಳೆದ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣವನ್ನು ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡಿದ್ದವು. ಬಿಜೆಪಿ ಅದರಲ್ಲಿ ಸಕ್ಸಸ್ ಕೂಡ ಕಂಡಿದೆ. ಇದೇ ನಿಟ್ಟಿನಲ್ಲಿ ಕೆಪಿಸಿಸಿ ಪಟ್ಟ ವಹಿಸಿಕೊಳ್ಳುತ್ತಲೇ ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣ ಘಟಕಕ್ಕೆ ವೇಗಕೊಟ್ಟಿದ್ದಾರೆ. ಪ್ರತೀ 10 ದಿನಗಳಿಗೊಮ್ಮೆ ರಾಜ್ಯ, ಜಿಲ್ಲಾ ಸಂಚಾಲಕರುಗಳ ಜೊತೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮೇಲಿಂದ ಮೇಲೆ ಸಭೆ ನಡೆಸುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದಲ್ಲಿಯೇ ಅತೀ ಹೆಚ್ಚು ಸಾಮಾಜಿಕ ಜಾಲತಾಣ ಘಟಕಗಳ ಜೊತೆಗೆ ಸಭೆ ನಡೆಸಿದವರಲ್ಲಿ ಡಿಕೆಶಿ ಮುಂಚೂಣಿಯಲ್ಲಿ ನಿಂತಿದ್ದಾರೆ.

ಅಲ್ಲದೇ 2 ದಿನಗಳ ಹಿಂದೆ 9 ಜನರ ರಾಜ್ಯ ಸಂಚಾಲಕರುಗಳ ಪಟ್ಟಿ ಪ್ರಕಟಿಸಿದ್ದಾರೆ. ನಟರಾಜ್ ಗೌಡ ರಾಜ್ಯ ಮುಖ್ಯಸ್ಥರಾಗಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೇಮಕವಾಗಿದ್ದರು. ಅವರಿಗೆ ಸಹಾಯಕರಾಗಿ 9 ಜನರ ರಾಜ್ಯ ಸಂಚಾಲಕರುಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೀ ವತ್ಸ, ಮಹಮ್ಮದ್ ನಲಪಾಡ್, ಸಂದೀಪ್ ಅಣಬೇರು, ಶೆರಿಲ್ ಐಯೋನ, ಅರುಣ್, ಶ್ರೀಜಿತ್, ಆನಂದ ಕುಮಾರ್, ಅರ್ಜುನ್ ಹಾಗೂ ಲಾವಣ್ಯ ಬಲ್ಲಾಳ್ ಹೆಸರುಗಳಿವೆ.

ಡಿ.ಕೆ.ಶಿವಕುಮಾರ್ ದುರ್ಬಲವಾಗಿರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಕ್ಕೆ ಹೊಸ ಸ್ವರೂಪ ನೀಡುತ್ತಾರೆಂಬ ನಿರೀಕ್ಷೆಯಿತ್ತು. ಆದರೆ ಡಿಕೆಶಿ ಸಾಮಾಜಿಕ ಜಾಲತಾಣಕ್ಕೆ ಸಮರ್ಥರನ್ನು ಆಯ್ಕೆ ಮಾಡುವಲ್ಲಿ ಎಡವಿದ್ದಾರೆನ್ನುತ್ತಾರೆ ಕಾಂಗ್ರೆಸ್ ನ ಆಂತರಿಕ ಮೂಲಗಳು. ಸಾಮಾಜಿಕ ಜಾಲತಾಣಕ್ಕೆ ಪ್ರತಿಭಾವಂತ, ಅರ್ಹ ಹಾಗೂ ಅನುಭವಸ್ಥರ ಯುವ ಪಡೆ ಅಗತ್ಯವಿದೆ. ಯಾಕೆಂದ್ರೆ ರಾಜ್ಯ ಬಿಜೆಪಿಯ ದೈತ್ಯ ಸಾಮಾಜಿಕ ಜಾಲತಾಣ ಪಡೆಯ ಮುಂದೆ ಕಳೆದ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಂಡಿಯೂರಿತ್ತು. ನವಚೈತನ್ಯ ನೀಡಬೇಕಾದ ಹೊಸ ಪಟ್ಟಿಯಲ್ಲಿ ಅರ್ಹರಲ್ಲದವರು ಹಾಗೂ ವೈಯಕ್ತಿಕ ಪ್ರಚಾರದ ಆಸಕ್ತಿಯಿರುವವರು ಇದ್ದಾರೆ. ಅವರು ಕಳೆದ ಸಂದರ್ಭದಲ್ಲಿ ಇಂತವರಿಂದಲೇ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಮಾತ್ರವಲ್ಲ ಮುಂದೆಯೂ ಇದನ್ನೇ ಮಾಡುತ್ತಾರೆ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.

ಸಾಮಾಜಿಕ ಜಾಲತಾಣದ ಘಟಕಗಳ ನೇಮಕಾತಿಯ ವಿರುದ್ದ ಕಾಂಗ್ರೆಸ್ ಪಾಳಯದಲ್ಲಿ ಅಪಸ್ವರ ಕೇಳಿಬರುತ್ತಿದ್ದಂತೆಯೇ ಜಯನಗರ ಶಾಸಕಿ ಸೌಮ್ಯ ರಡ್ಡಿ ಹಾಗೂ ರಕ್ಷ ರಾಮಯ್ಯ ಅವರನ್ನು ಘಟಕಕ್ಕೆ ಸೇರ್ಪಡೆಗೊಳಿಸಲಾಗಿದೆ. ಆದರೆ ಪ್ರತಿಭಾವಂತರು, ಅರ್ಹರು, ಪ್ರಚಾರ ಬಯಸದವರು ಎಂದಿಗೂ ಶಿಫಾರಸ್ಸು ಪತ್ರಗಳನ್ನು ಹಿಡಿಕೊಂಡು ಬರೋದಿಲ್ಲ. ಇದೀಗ ಟ್ರಬಲ್ ಶೂಟರ್ ಅವಧಿಯಲ್ಲಿಯೂ ಅದೇ ಶಿಫಾರಸ್ಸು ಹಾಗೂ ಮುಖನೋಡಿ ಮಣೆ ಹಾಕುವ ಸಂಸ್ಕೃತಿ ಮುಂದುವರಿದಿದೆ ಎನ್ನುತ್ತಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು. ದುರ್ಬಲವಾಗಿರುವ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣವನ್ನಿಟ್ಟುಕೊಂಡು ಬಿಜೆಪಿಯನ್ನು ಎದುರಿಸೋದಕ್ಕೆ ಶಕ್ತವಾಗಲಾರದು. ಇದು ಡಿಕೆಶಿ ಅವಧಿಯಲ್ಲಿ ನಡೆದಿರುವ ಆರಂಭಿಕ ಎಡವಟ್ಟು ಅನ್ನೋ ಮಾತುಗಳು ಕೇಳಿಬರುತ್ತಿವೆ.

ಸಮರ್ಥ, ಪ್ರಬಲ ಬಿಜೆಪಿಯ ಸಾಮಾಜಿಕ ಜಾಲತಾಣ ಪಡೆಯನ್ನು ಮಣಿಸಲು ಡಿಕೆಶಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಆದರೆ ಅರ್ಹ, ಪ್ರತಿಭಾವಂತರ ಪಡೆಕಟ್ಟಿಕೊಂಡರೆ ಮಾತ್ರ ಅದು ಡಿಕೆಶಿಯಿಂದ ಸಾಧ್ಯ. ಆದರೆ ಕಮಲ ಪಡೆ ಡಿಕೆಶಿ ರಣತಂತ್ರಕ್ಕೆ ಪ್ರತಿತಂತ್ರ ರೂಪಿಸದೇ ಇರಲಾರದು ಅನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕ ಕಾಂಗ್ರೆಸ್ ಪಾಳಯದಲ್ಲಿ ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ. ಅಸಮರ್ಥರನ್ನು ಘಟಕಕ್ಕೆ ಸೇರ್ಪಡೆಗೊಳಿಸಲಾಗಿದೆಯೆಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಸಮಿತಿಗೆ ನೇಮಕ ಮಾಡಿರುವವರನ್ನು ಅಷ್ಟು ಸುಲಭಕ್ಕೆ ಕಿತ್ತು ಹಾಕಲಾರದ ಸಂದಿಗ್ದ ಪರಿಸ್ಥಿತಿಗೆ ಸಿಲುಕಿದ್ದಾರೆ. ಒಟ್ಟಿನಲ್ಲಿ ಕೆಪಿಸಿಸಿ ಪಟ್ಟಗಿಟ್ಟಿಸಿಕೊಂಡಿರೋ ಡಿಕೆಶಿ ಎಚ್ಚರಿಕೆಯ ಹೆಜ್ಜೆಯಿಡಬೇಕಾಗಿದೆ.

Leave A Reply

Your email address will not be published.