ಬೆಂಗಳೂರು : ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಮತ್ತೊಂದು ವಾರ ಮುಂದುವರಿದಿದೆ. ಕೊರೊನಾ ವೈರಸ್ ಪೀಡಿತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಈಗಾಗಲೇ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸರಕಾರ ರಜೆ ಘೋಷಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದ್ರೆ 7,8,9 ನೇ ತರಗತಿಯ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ಪಾಸ್ ಆಗಲಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮಾರ್ಚ್ 16ರ ಒಳಗೆ 1ರಿಂದ 6ನೇ ತರಗತಿವರೆಗಿನ ಪರೀಕ್ಷೆಯನ್ನು ಮುಗಿಸುವಂತೆ ಹೇಳಿದ್ದ ಶಿಕ್ಷಣ ಇಲಾಖೆ 7,8 ಮತ್ತು 9ನೇ ತರಗತಿಯ ಪರೀಕ್ಷೆಗಳನ್ನು ಮಾರ್ಚ್ 23ರ ಒಳಗಾಗಿ ಮುಗಿಸಿ ಬೇಸಿಗೆ ರಜೆ ನೀಡುವಂತೆ ಸೂಚಿಸಿತ್ತು. ಆದರೆ ಕೊರೊನಾ ವೈರಸ್ ಗೆ ರಾಜ್ಯದಲ್ಲಿ ಮೊದಲ ಬಲಿ ಪಡೆಯುತ್ತಿದ್ದಂತೆಯೇ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಇದೀಗ 1 ರಿಂದ 6ನೇ ತರಗತಿ ವರೆಗಿನ ಮಕ್ಕಳನ್ನು ಪರೀಕ್ಷೆಯಿಲ್ಲದೇ ಪಾಸ್ ಮಾಡಲಾಗಿದ್ದು, ಬೇಸಿಗೆ ರಜೆ ನೀಡಲಾಗಿದೆ. 7 ರಿಂದ 9ನೇ ಗರಗತಿ ಮಕ್ಕಳಿಗೆ ಸ್ಟಡಿ ಹಾಲಿಡೇ ನೀಡಲಾಗಿದೆ. ಆದರೆ ಕೊರೊನಾ ವೈರಸ್ ಹೆಚ್ಚುತ್ತಿರೋದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಮಕ್ಕಳಿಗೆ ತಲೆನೋವು ತರಿಸಿದೆ.

ಈ ನಡುವಲ್ಲೇ ಮಾರ್ಚ್ 27ರಿಂದ ಎಸ್ಎಸ್ಎಲ್ ಸಿ ಪರೀಕ್ಷೆಗಳು ಆರಂಭಗೊಳ್ಳಲಿದೆ. ಮಾರ್ಚ್ ಅಂತ್ಯದೊಳಗೆ ಸೋಂಕು ನಿಯಂತ್ರಣಕ್ಕೆ ಬಂದರೆ ಪರೀಕ್ಷೆ ನಡೆಲಿದೆ. ಒಂದೊಮ್ಮೆ ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ 7 ರಿಂದ 9ನೇ ತರಗತಿವರೆಗಿನ ಮಕ್ಕಳನ್ನು ಪರೀಕ್ಷೆಯೇ ಇಲ್ಲದೇ ಪಾಸ್ ಮಾಡಿ, ಹಿಂದಿನ ಪರೀಕ್ಷೆಯ ಆಧಾರದ ಮೇಲೆ ಗ್ರೇಡಿಂಗ್ ನೀಡುವ ಚಿಂತನೆಯಲ್ಲಿದೆ ಶಿಕ್ಷಣ ಇಲಾಖೆ.