ನಿನ್ನೆಯವರೆಗೂ ರಾಜ್ಯಸರ್ಕಾರ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಸಿದ್ಧವಾಗಿದೆ, ಸನ್ನದ್ಧವಾಗಿದೆ ಎಂದೆಲ್ಲ ಮಾಧ್ಯಮಗಳ ಎದುರು ಬಡಬಡಿಸುತ್ತಿದ್ದ ರಾಜ್ಯ ಸರ್ಕಾರದ ಅಸಲಿಯತ್ತು ಈಗ ಬೆಳಕಿಗೆ ಬಂದಿದೆ. ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಾಗಿ ಹಾಹಾಕಾರವೆದ್ದಿದ್ದು, ಈಗ ಕೇಂದ್ರದ ಮುಂದೇ ರಾಜ್ಯ ಸರ್ಕಾರ ಆಕ್ಸಿಜನ್ ಗಾಗಿ ಬೊಗಸೆಯೊಡ್ಡಿದೆ.

ರಾಜ್ಯದಲ್ಲಿ ಆಕ್ಸಿಜನ್ ತೀವ್ರ ಕೊರತೆ ಇರುವ ಹಿನ್ನಲೆಯಲ್ಲಿ ತಕ್ಷಣ ಪೊರೈಸುವಂತೆ ಮನವಿ ಮಾಡಿ ರಾಜ್ಯದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಪತ್ರ ಬರೆದಿದ್ದಾರೆ. ಸಿಎಂ ಬಿಎಸ್ವೈ ಸೂಚನೆ ಮೇರೆಗೆ ರವಿಕುಮಾರ್ ಕೇಂದ್ರ ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ.

ಪ್ರಸ್ತುತ ರಾಜ್ಯಕ್ಕೆ ಕೇಂದ್ರದಿಂದ 390 ಮೆಟ್ರಿಕ್ ಟನ್ ಆಕ್ಸಿಜನ್ ಪೊರೈಕೆಯಾಗುತ್ತಿದೆ. ಇದಲ್ಲದೇ ರಾಜ್ಯದಲ್ಲಿ ಒಟ್ಟು 800 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಪ್ರತಿನಿತ್ಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗೆ ಬೇಡಿಕೆ ಹೆಚ್ಚಿದೆ.

ಹೀಗಾಗಿ ಪೊರೈಕೆ ಸಾಕಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಜನರು ಆಕ್ಸಿಜನ್ ಗಾಗಿ ಸರತಿ ಸಾಲಿನಲ್ಲಿ ಕ್ಯೂನಿಲ್ಲುವಂತಾಗಿದೆ. ರಾಜ್ಯಕ್ಕೆ 1100 ಪ್ರಸ್ತುತ 1100 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯವಿದೆ. ಹೀಗಾಗಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆಕ್ಸಿಜನ್ ಒದಗಿಸುವಂತೆ ರಾಜ್ಯ ಕೇಂದ್ರಕ್ಕೆ ಮನವಿ ಮಾಡಿದೆ.

ಒಟ್ಟಿನಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ರೋಗಿಗಳಿಗೆ ಆಕ್ಸಿಜನ್ ಸಹಿತ ಬೆಡ್ ಸಿಗದೇ ಪರದಾಡುವ ಸ್ಥಿತಿ ಎದುರಾಗಿದ್ದು, ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಸರ್ಕಾರ ಈಗ ಕೇಂದ್ರಕ್ಕೆ ಆಕ್ಸಿಜನ್ ಗಾಗಿ ಬೇಡಿಕೆ ಇಟ್ಟಿದೆ.