ನವದೆಹಲಿ : ದೇಶದಾದ್ಯಂತ ಕೊರೋನಾ ಎಮರ್ಜೆನ್ಸಿ ಹೇರಿಕೆಯಾಗಿರುವುದರಿಂದ ದೇಶದ ಜನರ ಅನುಕೂಲಕ್ಕಾಗಿ ಕೇಂದ್ರ ಸರಕಾರ 1.7 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಕೊರೊನಾ ವಿರುದ್ದ ಹೋರಾಟ ಮಾಡುತ್ತಿರುವವರಿಗೆ ಮೂರು ತಿಂಗಳವರಗೆ 50 ಲಕ್ಷ ರೂಪಾಯಿ ವಿಮಾ ಸೌಲಭ್ಯ, ಬಡವರಿಗೆ ಮೂರು ತಿಂಗಳ ಪಡಿತರ ವ್ಯವಸ್ಥೆ, ಉಚಿತ ಗ್ಯಾಸ್, ರೈತರು, ವಿಧವೆಯರು, ದಿವ್ಯಾಂಗರು, ವೃದ್ದರಿಗೆ, ಸಂಘಟಿತ ವಲಯದ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ ನೆರವಾಗೋ ಯೋಜನೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದ ಯೋಜನೆಯನ್ನು ಘೋಷಿಸಿದ್ದಾರೆ.

ದೇಶದಾದ್ಯಂತ ಕೊರೊನಾ ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ಕೊರೊನಾ ವಿರುದ್ದ ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹೋರಾಟವನ್ನು ನಡೆಸುತ್ತಿದ್ದಾರೆ. ಇಂತಹವರಿಗೆ ನೆರವಾಗೋ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಯೋಜನೆಯನ್ನು ಘೋಷಿಸಿದೆ. ಪ್ರತೀ ತಿಂಗಳು ತಲಾ 15 ಲಕ್ಷ ರೂಪಾಯಿಯಂತೆ ಮುಂದಿನ ಮೂರು ತಿಂಗಳ ಕಾಲ ಬರೋಬ್ಬರಿ 50 ಲಕ್ಷ ರೂಪಾಯಿ ವಿಮಾ ಯೋಜನೆಯನ್ನು ಕೇಂದ್ರ ಸರಕಾರ ಘೋಷಣೆ ಮಾಡಿದೆ.

ಕೊರೊನಾ ಯೋಜನೆಯ ಹಿನ್ನೆಲೆಯಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು ಅನ್ನೋ ಉದ್ದೇಶದಿಂದಲೇ ವಿಶೇಷ ಪಡಿತರ ಯೋಜನೆಯನ್ನು ಘೋಷಿಸಿದ್ದಾರೆ. ದೇಶದಲ್ಲಿರುವ 80 ಕೋಟಿ ಬಡವರಿಗೆ ಮುಂದಿನ ಮೂರು ತಿಂಗಳುಗಳ ಕಾಲ ಉಚಿತವಾಗಿ 5 ಕೆ.ಜಿ; ಅಕ್ಕಿ ಮತ್ತು 5 ಗೋದಿ ಹಾಗೂ 1 ಕೆ.ಜಿ. ಬೇಳೆಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ.

ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ 6,000 ಕೋಟಿ ರೂಪಾಯಿಯನ್ನು ನೀಡಲಾಗುತ್ತಿದ್ದು, ಮೊದಲ ಕಂತಿನಲ್ಲಿ 2,000 ಕೋಟಿ ರೂಪಾಯಿಯನ್ನು ಕೂಡಲೇ ಬಿಡುಗಡೆ ಮಾಡಲಾಗುತ್ತಿದೆ. ಈ ಯೋಜನೆಯಿಂದಾಗಿ ದೇಶದಲ್ಲಿರುವ ಸುಮಾರು 8.69 ಕೋಟಿ ರೈತರಿಗೆ ಅನುಕೂಲವಾಗಲಿದೆ. ಕೃಷಿ ಕಾರ್ಯಗಳಿಗೆ ನರೇಗಾ ಹಣ ಬಳಕೆ ಮಾಡಲು ಉದ್ದೇಶಿಸಲಾಗಿದೆ.

ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಪಡೆಯುತ್ತಿರುವ ಸುಮಾರು 8.03 ಕೋಟಿ ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ಗ್ಯಾಸ್ ಸಿಲಿಂಡರ್ ಒದಗಿಸಲು ಕೇಂದ್ರ ಸರಕಾರ ಮುಂದಾಗಿದೆ.

ಸ್ವಸಹಾಯ ಸಂಘಗಳಲ್ಲಿರುವ ಮಹಿಳೆಯರ ಅನುಕೂಲತೆಗಾಗಿ ಕೇಂದ್ರ ಸರಕಾರ ಮಹತ್ವದ ಯೋಜನೆ ರೂಪಿಸಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ 10 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಒದಗಿಸಲು ಮುಂದಾಗಿದೆ. 20 ಲಕ್ಷ ರೂಪಾಯಿಯವರೆಗೆ ಯಾವುದೇ ಭದ್ರತೆಯಿಲ್ಲದೇ ಸಾಲ ಸೌಲಭ್ಯ ಒದಗಿಸುವುದರಿಂದ ದೇಶದಲ್ಲಿರುವ ಸುಮಾರು 63 ಲಕ್ಷ ಸ್ವಸಹಾಯ ಸಂಘಗಳಿಗೆ ಅನುಕೂಲವಾಗಲಿದೆ.

ನರೇಗಾ ಯೋಜನೆಯ ದಿನಗೂಲಿ ನೌಕರರ ದಿನಗೂಲಿ ಹಣವನ್ನು ಏರಿಕೆ ಮಾಡಲಾಗಿದೆ. 182 ರೂಪಾಯಿಯಿಂದ 202 ರೂಪಾಯಿಗೆ ಏರಿಕೆ. ಇದರಿಂದಾಗಿ ದೇಶದ 6 ಕೋಟಿ ಕುಟುಂಬಗಳಿಗೆ ಈ ಯೋಜನೆಯಲ್ಲಿ ಅನುಕೂಲವಾಗಲಿದೆ.

ವೃದ್ದೆಯರು, ದಿವ್ಯಾಂಗರು, ವಿಧವೆಯರಿಗೆ ಅನುಕೂಲವಾಗುವಂತೆ ನೀಡಲಾಗುತ್ತಿರೋ ಸಹಾಯಧನದ ಜೊತೆಗೆ ಹೆಚ್ಚುವರಿಯಾಗಿ ಪ್ರತೀ ತಿಂಗಳು 1 ಸಾವಿರ ರೂಪಾಯಿ ಸಹಾಯಧನ. ಎರಡು ಕಂತುಗಳಲ್ಲಿ ಹಣ ನೀಡಲಾಗುತ್ತದೆ.

ಮಹಿಳೆಯರ ಅನುಕೂಲಕ್ಕಾಗಿ 20 ಕೋಟಿ ಮಹಿಳಾ ಜನ್ ಧನ್ ಖಾತೆದಾರರಿಗೆ ಪ್ರತೀ ತಿಂಗಳು 500 ರೂಪಾಯಿಯಂತೆ ಮುಂದಿನ ಮೂರು ತಿಂಗಳ ಕಾಲ ಸುಮಾರು 1,500 ರೂಪಾಯಿಯನ್ನು ಜಮಾ ಮಾಡಲಾಗುತ್ತದೆ.

ಕೈಗಾರಿಕಾ ಕ್ಷೇತ್ರಕ್ಕೂ ಬಿಗ್ ರಿಲೀಫ್ ನೀಡಿದೆ. ಸಂಘಟಿತ ಕ್ಷೇತ್ರದ ಕಾರ್ಮಿಕರ ಮುಂದಿನ 3 ತಿಂಗಳುಗಳ ಕಾಲ ಇಪಿಎಫ್ ಹಣವನ್ನು ಕೇಂದ್ರ ಸರಕಾರವೇ ಪಾವತಿಸಲಿದೆ. ನೌಕರರು ಶೇ.12 ಕೇಂದ್ರದ ಪಾಲು ಶೇ.12 ಹಣವನ್ನೂ ಪಾವತಿಸಲಿದೆ. 100 ನೌಕರರಿರುವ ಕಂಪೆನಿಗಳಿಗೆ ಈ ನಿಯಮ ಅನ್ವಯವಾಗಲಿದೆ. 15 ಸಾವಿರ ಕ್ಕಿಂತ ಕಡಿಮೆ ಸಂಬಳ ಅಥವಾ 90ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವವರು ಇಪಿಎಫ್ ಹಣವನ್ನು ಪಾವತಿ ಮಾಡುವಂತಿಲ್ಲ. ಅಲ್ಲದೇ ಪಿಎಫ್ ಪಂಡ್ ನಿಂದ ಶೇ.75ರಷ್ಟು ಹಣವನ್ನು ಪಡೆಯಲು ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ.

ಕಟ್ಟಡ ಕಾರ್ಮಿಕರಿಗೆ ನೆರವು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಸರಕಾರದ ಸುಮಾರು 31,000 ಕೋಟಿ ರೂಪಾಯಿ ಅನುದಾನ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಒಟ್ಟು ಈ ಯೋಜನೆಯಡಿಯಲ್ಲಿ ಸುಮಾರು 3.5 ಕೋಟಿ ಕಾರ್ಮಿಕರಿಗೆ ನೆರವು ನೀಡುವಂತೆ ರಾಜ್ಯ ಸೂಚಿಸಲಾಗಿದೆ.