ನ್ಯೂಯಾರ್ಕ್ : ಕೊರೊನಾ (ಕೋವಿಡ್ -19) ಸೋಂಕು ಕಾಣಸಿಕೊಂಡು ಸರಿ ಸುಮಾರು ನಾಲ್ಕೈದು ತಿಂಗಳು ಕಳೆದಿದೆ. ಆದ್ರೆ ರೋಗ ಲಕ್ಷಣಗಳ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ವಿಶ್ವದ ಹಲವು ರಾಷ್ಟ್ರಗಳು ಕೂಡ ಕೊರೊನಾ ವಿಚಾರವಾಗಿ ಸಂಶೋಧನೆಗಳನ್ನು ನಡೆಸುತ್ತಿವೆ. ಕೆಮ್ಮು, ಜ್ವರ, ನೆಗಡಿ ಇದ್ರೆ ಕೊರೊನಾ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆಯು ಕೊರೋನಾ ರೋಗದ ಇನ್ನಷ್ಟು ಲಕ್ಷಣಗಳನ್ನ ಪತ್ತೆ ಹಚ್ಚಿದೆ.

ಕೊರೊನಾ ಸೋಂಕು ಕಾಣಿಸಿಕೊಂಡ ನಂತರದಲ್ಲಿ ಸಾಮಾನ್ಯವಾಗಿ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ಸಮಸ್ಯೆ ಇರುವವರನ್ನು ಮಾತ್ರವೇ ತಪಾಸಣೆಗೆ ಒಳಪಡಿಸಲಾಗುತ್ತಿತ್ತು.

ಅಲ್ಲದೇ ಕೊರೊನಾ ಶಂಕಿತರು ಅಂತಾ ಭಾವಿಸಲಾಗುತ್ತಿತ್ತು. ಆದ್ರೀಗ ಕೆಮ್ಮು, ಜ್ವರ, ನೆಗಡಿ ಮಾತ್ರವಲ್ಲದೇ ಮೈಕೈ ನೋವು ಸೇರಿ ಒಟ್ಟು 6 ಹೊಸ ಲಕ್ಷಣಗಳನ್ನು ಗುರುತಿಸಲಾಗಿದೆ.

ಮೈಕೈ ನೋವು, ರುಚಿ, ವಾಸನೆ ಹತ್ತದಿರುವುದು, ನಡುಕ ಬರುವುದು, ತಲೆನೋವು, ಗಂಟಲು ನೋವು ಕೂಡ ಕೊರೊನಾ ಸೋಂಕಿನ ಲಕ್ಷಣಗಳು ಅಂತಾ ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆ ಹೇಳುತ್ತಿದೆ. ಇದೇ ಕಾರಣಗಳಿಂದಾಗಿ ಕೊರೊನಾ ದೃಢಪಡುವ ಮುನ್ನವೇ ಹಲವರು ಸಾವನ್ನಪ್ಪುತ್ತಿದ್ದಾರೆ.

ಪರಿಣಿತರ ಪ್ರಕಾರ, ಕೋವಿಡ್ ರೋಗದ ಸೋಂಕು ತಗುಲಿದ 2-14 ದಿನಗಳಲ್ಲಿ ರೋಗ ಲಕ್ಷಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಕೆಲವೊಮ್ಮೆ ರೋಗ ಲಕ್ಷಣಗಳು ಬೆಳಕಿಗೆ ಬರುವುದು ಇನ್ನೂ ತಡವಾಗಬಹುದು. ಆದ್ದರಿಂದ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಅತ್ಯಗತ್ಯ ಎನ್ನಲಾಗುತ್ತಿದೆ.