ಡೆಡ್ಲಿ ಕೊರೊನಾ ವಿರುದ್ದ ಗೆದ್ದ‘ರಿಪಬ್ಲಿಕ್ ಆಫ್ ಸೀಶೆಲ್ಸ್’: ಜೂನ್ 1ರಿಂದ ವಿಮಾನಯಾನ ಸೇವೆ ಪುನರಾರಂಭ

0

ವಿಕ್ಟೋರಿಯಾ : ಕೊರೊನಾ (ಕೋವಿಡ್-19) ಮಹಾಮಾರಿ ವಿಶ್ವದಾದ್ಯಂತ ತನ್ನ ಕದಂಬಬಾಹುವನ್ನು ಚಾಚಿದೆ. ವಿಶ್ವದ ಶ್ರೀಮಂತ ರಾಷ್ಟ್ರ, ವಿಶ್ವದ ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಹೊಂದಿರುವ ದೇಶಗಳೇ ಡೆಡ್ಲಿ ವೈರಸ್ ಮಾರಿಗೆ ತತ್ತರಿಸಿವೆ. ಆದರೆ ಪುಟ್ಟ ದ್ವೀಪ ರಾಷ್ಟ್ರ ‘ರಿಪಬ್ಲಿಕ್ ಆಫ್ ಸೀಶೆಲ್ಸ್’ ಡೆಡ್ಲಿ ಮಹಾಮಾರಿಯ ವಿರುದ್ದ ಗೆದ್ದು ಬೀಗಿದೆ.

ಆಫ್ರಿಕಾ ಖಂಡದ ಸಮೀಪದಲ್ಲಿರುವ ಹಿಂದೂ ಮಹಾಸಾಗರದ ದ್ವೀಪರಾಷ್ಟ್ರ ಸೀಶೆಲ್ಸ್. ಇಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರು ಹಾಗೂ ಶ್ರೀಲಂಕಾದ ಪ್ರಜೆಗಳು ವಾಸಿಸುತ್ತಿದ್ದಾರೆ. 1976ರಲ್ಲಿ ಸೀಶೆಲ್ಸ್ ಯುನೈಟೆಡ್ ಕಿಂಗ್ ಡಮ್ ನಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿರುವ ಸೀಶೆಲ್ಸ್ ಸುಮಾರು 115 ದ್ವೀಪಗಳನ್ನು ಒಳಗೊಂಡಿರುವ ಪುಟ್ಟ ರಾಷ್ಟ್ರ.

ತನ್ನ ನಿಸರ್ಗ ಸೌಂದರ್ಯದಿಂದಲೇ ವಿಶ್ವದ ಜನರ ಗಮನ ಸೆಳೆದಿರೋ ಸೀಶೆಲ್ಸ್, ಪ್ರಮುಖ ಪ್ರವಾಸಿ ತಾಣವೂ ಹೌದು. ಇಲ್ಲಿರೋ ನೂರಾರು ಬೀಚ್ ಗಳಲ್ಲಿ ವಿಹರಿಸಲು ವರ್ಷಂಪ್ರತಿ ಲಕ್ಷಾಂತರ ಮಂದಿ ಸೀಶೆಲ್ಸ್ ಗೆ ಆಗಮಿಸುತ್ತಾರೆ.

ಪುಟ್ಟ ದ್ವೀಪರಾಷ್ಟ್ರವಾಗಿದ್ದರೂ ಸೀಶೆಲ್ಸ್ ಇಂದು ಪ್ರವಾಸೋದ್ಯಮದ ನಿಟ್ಟಿನಲ್ಲಿ ವಿಶ್ವದ ಗಮನ ಸೆಳೆದಿದೆ. ಸುಮಾರು 1 ಲಕ್ಷ ( 91,000) ಜನಸಂಖ್ಯೆಯನ್ನು ಹೊಂದಿರುವ ಸಿಶೇಲ್ಸ್ ಕೊರೊನಾ ಮಹಾಮಾರಿಯನ್ನು ಗೆದ್ದ ಖುಷಿಯಲ್ಲಿದೆ.

ವಿಶ್ವದ ನಾನಾ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗಲೇ ಸೀಶೆಲ್ಸ್ ನಲ್ಲಿಯೂ ಕೂಡ ಡೆಡ್ಲಿ ಮಹಾಮಾರಿ ಒಕ್ಕರಿಸಿತ್ತು. ದ್ವೀಪರಾಷ್ಟ್ರದಲ್ಲಿ 11 ಮಂದಿ ಕೊರೊನಾ ಮಹಾಮಾರಿಗೆ ತುತ್ತಾಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಸೀಶೆಲ್ಸ್ ಗಣರಾಜ್ಯ ಎಚ್ಚೆತ್ತುಕೊಂಡಿತ್ತು. ಲಾಕ್ ಡೌನ್ ಆದೇಶವನ್ನು ಜಾರಿ ಮಾಡೋ ಮೂಲಕ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿತ್ತು. ಹೀಗಾಗಿ ಸೀಶೆಲ್ಸ್ ನಲ್ಲಿ ಕೊರೊನಾ ಸೋಂಕು ಅಷ್ಟಾಗಿ ವ್ಯಾಪಿಸಿಲ್ಲ.

ಎಪ್ರಿಲ್ 5ರಂದು ವ್ಯಕ್ತಿಯೋರ್ವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ, ಆನಂತರದಲ್ಲಿ ಸೀಶೆಲ್ಸ್ ನಲ್ಲಿ ಯಾವುದೇ ಹೊಸ ಕೊರೊನಾ ಕೇಸುಗಳು ದಾಖಲಾಗಿಲ್ಲ. ಅಲ್ಲದೇ ಕೊರೊನಾ ಸೊಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ 11 ಮಂದಿಯ ಪೈಕಿ 6 ಮಂದಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಉಳಿದಂತೆ 5 ಮಂದಿಗೆ ಆಸ್ಪತ್ರೆಯ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೇ 3ರ ವರೆಗೆ ಯಾವುದೇ ಹೊಸ ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳದೇ ಇದ್ರೆ ಲಾಕ್ ಡೌನ್ ಆದೇಶವನ್ನು ಹಿಂದಡೆಯೋದಾಗಿ ಸೀಶೆಲ್ಸ್ ಗಣರಾಜ್ಯದ ಅಧ್ಯಕ್ಷ ಡ್ಯಾನಿ ಫೌರ್ ಘೋಷಣೆ ಮಾಡಿದ್ದಾರೆ. ಮಾತ್ರವಲ್ಲ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿರುವ ಸೀಶೆಲ್ಸ್ ನಿವಾಸಿಗಳಿಗೆ ಧನ್ಯವಾದ ಸರ್ಮಪಿಸಿದ್ದಾರೆ.

ಸೀಶೆಲ್ಸ್ ದ್ವೀಪರಾಷ್ಟ್ರದಲ್ಲಿ ಲಾಕ್ ಡೌನ್ ಆದೇಶವನ್ನು ಹಿಂಪಡೆಯುವ ಸಲುವಾಗಿ ಈಗಾಗಲೇ ಸೀಶೆಲ್ಸ್ ಗಣರಾಜ್ಯದ ಅಧ್ಯಕ್ಷ ಡ್ಯಾನಿ ಫೌರ್ ಸಾರ್ವಜನಿಕ ಆರೋಗ್ಯ ಆಯುಕ್ತರಾಗಿರುವ ವೈದ್ಯ ಜೂಡ್ ಗೆಡಿಯನ್ ಹಾಗೂ ಅವರ ತಂಡದೊಂದಿಗೆ ಚರ್ಚೆ ನಡೆಸಿದ್ದಾರೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಲಾಕ್ ಡೌನ್ ನಿರ್ಬಂಧ ತೆರವು ಮಾಡಲು ಮುಂದಾಗಿದೆ.

ಮೇ 3ರ ವರೆಗೆ ಯಾವುದೇ ಹೊಸ ಕೊರೊನಾ ಪ್ರಕರಣ ಕಂಡುಬಾರದೇ ಇದ್ದಲ್ಲಿ ಮೇ 4 ರಂದು ಜನರು ಮುಕ್ತವಾಗಿ ಓಡಾಟಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತದೆ.

ನಂತರದ ದಿನಗಳಲ್ಲಿ ಹಂತ ಹಂತವಾಗಿ ಆರೋಗ್ಯ ಇಲಾಖೆಯ ಮಾರ್ಗದರ್ಶನದೊಂದಿಗೆ ಅಂತ್ಯಕ್ರೀಯೆ, ಧಾರ್ಮಿಕ ಸೇವೆಗಳನ್ನು ನಡೆಸಲು ಅವಕಾಶವನ್ನು ಕಲ್ಪಿಸಲಾಗುತ್ತದೆ. ಮೂರನೇ ಹಂತದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸಂಜೆ 8 ಗಂಟೆಯ ವರೆಗೆ ತರೆಯಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

ಎಲ್ಲವೂ ಸರಿಯಾಗಿ ನಡೆಯುತ್ತಿದೆ ಅನ್ನೋದು ಮನವರಿಕೆಯಾದ ನಂತರದಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಆರಂಭಿಸಲಾಗುತ್ತದ್ದು, ನಿರ್ಮಾಣ ಕಾಮಗಾರಿ ಕಂಪೆನಿಗಳು ತಮ್ಮ ಕಾರ್ಯವನ್ನು ಪುನರಾರಂಭಿಸಲಿವೆ. ಮೇ 11ರಿಂದ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಎ-ಲೆವೆಲ್ಸ್, ಗೈ ಮೊರೆಲ್ ಇನ್ಸ್ಟಿಟ್ಯೂಟ್ ಮತ್ತು ಸೀಶೆಲ್ಸ್ ವಿಶ್ವವಿದ್ಯಾಲಯ ಸೇರಿದಂತೆ ಎಲ್ಲಾ ಪೋಸ್ಟ್ – ಸೆಕೆಂಡರಿ ಸಂಸ್ಥೆಗಳು ಕಾರ್ಯಾರಂಭ ಮಾಡಲಿದ್ದು, ಮಕ್ಕಳಿಗೆ ಆರೋಗ್ಯ ಸೇವೆಯನ್ನು ಒದಗಿಸಲಿವೆ. ಅಲ್ಲದೇ ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಿರುವ ಶಾಲೆಗಳನ್ನು ಮೇ 18 ರಿಂದ ಆರಂಭಿಸಲು ಪ್ಲ್ಯಾನ್ ರೂಪಿಸಲಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭಗೊಳ್ಳಲಿವೆ.

ಜೂನ್ 1ರಿಂದ ವಿಮಾನ ಸೇವೆ
ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ವಿಮಾನಯಾನ ಸೇವೆಯನ್ನು ಜೂನ್ 1ರಿಂದ ಆರಂಭಿಸಲು ನಿರ್ಧರಿಸಲಾಗಿದೆ. ಆರಂಭದಲ್ಲಿ ಕೇವಲ ವಾಣಿಜ್ಯ ವಿಮಾನಗಳಷ್ಟೇ ಹಾರಾಟ ನಡೆಸಲಿವೆ. ನಂತರದಲ್ಲಿ ವಿದೇಶಿ ವಿಮಾನಯಾನ ಸೇವೆ ಆರಂಭಗೊಳ್ಳಲಿದ್ದು, ವಿದೇಶಗಳಿಗೆ ತೆರಳಲು ಹಾಗೂ ಸ್ವದೇಶಕ್ಕೆ ಮರಳು ಅವಕಾಶವನ್ನು ಕಲ್ಪಿಸಲಾಗುತ್ತದೆ.

ಅಲ್ಲದೇ ಸರಕು ತುಂಬಿರುವ ಶಿಫ್ ಗಳು ಕೂಡ ಸೀಶೆಲ್ಸ್ ಪ್ರವೇಶಿಸಬಹುದಾಗಿದೆ. ಮಾತ್ರವಲ್ಲದೇ ಕ್ರೀಡಾ ಚಟುವಟಿಕೆಗಳು ಕೂಡ ಪುನರಾರಂಭಗೊಳ್ಳಲಿವೆ.

ಭಾರತ ಹಾಗೂ ಶ್ರೀಲಂಕಾದಲ್ಲಿರುವ ಸೀಶೆಲ್ಸ್ ನಿವಾಸಿಗಳನ್ನು ತಮ್ಮ ದೇಶಕ್ಕೆ ವಾಪಾಸ್ ಕರೆತರುವ ನಿಟ್ಟಿನಲ್ಲಿ ಏರ್ ಸಿಶೇಲ್ಸ್ ಕೂಡ ಹಾರಾಟವನ್ನು ನಡೆಸಲಿದೆ. ಹೀಗಾಗಿ ಸಿಶೇಲ್ಸ್ ನಿವಾಸಿಗಳು ನಿಟ್ಟಿಸಿರು ಬಿಟ್ಟಿದ್ದಾರೆ.

ಒಟ್ಟಿನಲ್ಲಿ ದ್ವೀಪರಾಷ್ಟ್ರ ಕಟ್ಟುನಿಟ್ಟಿನ ಕ್ರಮಗಳಿಂದಲೇ ಇಂದು ಕೊರೊನಾ (ಕೋವಿಡ್ -19) ಮಹಾಮಾರಿಯ ವಿರುದ್ದದ ಹೋರಾಟದಲ್ಲಿ ಗೆದ್ದುಬೀಗಿದೆ. ಸಿಶೇಲ್ಸ್ ನಲ್ಲಿ ಕೈಗೊಂಡಿದ್ದ ಕ್ರಮಗಳೇ ಇದೀಗ ಇತರರಾಷ್ಟ್ರಗಳಿಗೂ ಮಾದರಿಯಾಗಿದೆ.

Leave A Reply

Your email address will not be published.