ಬೆಂಗಳೂರು : ಕೊರೊನಾ ವೈರಸ್ ಮಹಾಮಾರಿ ಸಿಲಿಕಾನ್ ಸಿಟಿ ದಿನೇ ದಿನೇ ಆತಂಕವನ್ನು ತಂದೊಡ್ಡುತ್ತಿದೆ. ಇದೀಗ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸರಕಾರ ಪರ್ಯಾಯ ಜಾಗವನ್ನು ಹುಡುಕುವುದಕ್ಕೆ ಹೊರಟಿದೆ. ಸಿಎಂ ಯಡಿಯೂರಪ್ಪ ಸ್ಮಶಾನಕ್ಕೆ ಪ್ರತ್ಯೇಕ ಜಾಗ ಹುಡುಕುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ಸೋಂಕು ದಾಖಲೆಯ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತಿದೆ. ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ ಒಂದೇ ದಿನ 918ಕ್ಕೆ ಏರಿಕೆಯನ್ನು ಕಂಡಿದ್ದು, ಬೆಂಗಳೂರು ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಜನರು ಕೊರೊನಾ ಆರ್ಭಟದಿಂದಾಗಿ ಮನೆಯಿಂದ ಹೊರಬರುವುದಕ್ಕೂ ಭಯ ಪಡುತ್ತಿದ್ದಾರೆ. ಇನ್ನೊಂದೆಡೆ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆಯಲ್ಲಿಯೂ ಏರಿಕೆಯನ್ನು ಕಾಣುತ್ತಿದೆ.

ಈಗಾಗಲೇ ಬೆಂಗಳೂರೊಂದರಲ್ಲೇ ಬರೋಬ್ಬರಿ 84 ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ತೀವ್ರತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಕೊರೊನಾ ಸೋಂಕಿನಿಂದ ಬಲಿಯಾದವರ ಅಂತ್ಯಕ್ರಿಯೆ ನಡೆಸುವುದಕ್ಕೂ ಸ್ಮಶಾನದ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಬೆಂಗಳೂರು ನಗರದಲ್ಲಿ 40 ಸ್ಮಶಾನಗಳಿದ್ದು, 12 ವಿದ್ಯುತ್ ಚಿತಾಗಾರಗಳಿವೆ. ಇಷ್ಟಿದ್ದರೂ ಕೂಡ ತಜ್ಞರ ಮಾಹಿತಿಯ ಪ್ರಕಾರ ಕೊರೊನಾ ಸೋಂಕು ಜುಲೈ ಅಂತ್ಯದ ವೇಳೆಗೆ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದ್ದು, ಬೆಂಗಳೂರು ನಗರವೊಂದರಲ್ಲಿ ಬರೋಬ್ಬರಿ 25,000ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಲಿದೆ ಎನ್ನುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರನ್ನು ಅಂತ್ಯಕ್ರಿಯೆ ನಡೆಸಲು ಪ್ರತ್ಯೇಕ ಸ್ಮಶಾನಕ್ಕಾಗಿ ಜಾಗವನ್ನು ಹುಡುಕ ಬೇಕು. ಅಲ್ಲದೇ ಕೊರೊನಾ ಸೋಂಕಿಗೆ ಬಲಿಯಾದವರ ಅಂತ್ಯಕ್ರಿಯೆಗೆ ಪ್ರತ್ಯೇಕ ತಂಡವನ್ನು ರಚಿಸುವಂತೆ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಸಿಎಂ ಸೂಚನೆಯ ಬೆನ್ನಲ್ಲೇ ಬಿಬಿಎಂಪಿ ಕೂಡ ಕಾರ್ಯೋನ್ಮುಖವಾಗಿದೆ. ಈಗಾಗಲೇ ಬೆಂಗಳೂರು ಹೊರವಲಯದಲ್ಲಿ 9 ಕಡೆ ಜಾಗಗಳನ್ನು ಗುರುತಿಸಲಾಗಿದೆ. ಎಲ್ಲಾ ಧರ್ಮೀಯರಿಗೂ ಕೂಡ ಒಂದೇ ಕಡೆ ಅಂತ್ಯಕ್ರಿಯೆ ನಡೆಸಲು ಪ್ಲ್ಯಾನ್ ರೂಪಿಸಲಾಗಿದೆ. ಇನ್ನು ಗೋಮಾಳದ ಜಾಗವನ್ನು ಸ್ಮಶಾನಕ್ಕಾಗಿ ಬಳಕೆ ಮಾಡಲು ಬಿಬಿಎಂಪಿ ನಿರ್ಧಾರವನ್ನು ಕೈಗೊಂಡಿದೆ.