ಬ್ರಹ್ಮಾವರ : ಕೊರೊನಾ ವೈರಸ್ ಸೋಂಕು ಕೋಟ ಹೋಬಳಿಯಲ್ಲಿ ಹೆಚ್ಚುತ್ತಿದೆ. ಇಂದು ಬರೋಬ್ಬರಿ 11 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕೋಟ ಹೋಬಳಿಯ ಕೋಟತಟ್ಟು – ಹಂದಟ್ಟುವಿನಲ್ಲಿ 4 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಾಲಿಗ್ರಾಮದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದ 4 ಮಂದಿಗೆ ಕೊರೊನಾ ಸೋಂಕು ಖಚಿತವಾಗಿದೆ.

ಈ ಹಿನ್ನೆಲೆಯಲ್ಲಿ ಕೋಟ ಕಂದಾಯ ನಿರೀಕ್ಷಕರಾದ ರಾಜು ಅವರ ನೇತೃತ್ವದಲ್ಲಿ ಕೊರೊನಾ ಸೋಂಕಿತರ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದ್ದು, 8 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಇನ್ನು ಚೇಂಪಿಯ ಮೂಡಹಡುವಿನಲ್ಲಿಯೂ ಕೊರೊನಾ ಸೋಂಕು ಹೆಚ್ಚುತ್ತಿದೆ. ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ 5 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೂಡಹಡು ಪ್ರದೇಶದಲ್ಲಿಯೂ ಸೀಲ್ ಡೌನ್ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ಮೂಡಹಡುವಿನಲ್ಲಿಯೂ ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರಿಗೆ ಕೊರೊನಾ ಪತ್ತೆಯಾಗಿದೆ.

ಮುಂಬೈನಿಂದ ಬಂದಿದ್ದವರಿಂದಲೇ ಹೊಸಾಳದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇದೀಗ ಮುಂಬೈನಿಂದ ಆಗಮಿಸಿದ್ದ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ನಿನ್ನೆಯಷ್ಟೇ ಹೆರಾಡಿಯಲ್ಲಿ 1, ಶಿರಿಯಾರದಲ್ಲಿ 2, ಅಚ್ಲಾಡಿಯಲ್ಲಿ 1, ಚಿತ್ರಪಾಡಿಯಲ್ಲಿ 1 ಹಾಗೂ ನಡೂರಿನಲ್ಲಿ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ನಿನ್ನೆ ಒಟ್ಟು 6 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಇಂದು ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕೋಟ ಹೋಬಳಿಯಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವುದು ಆತಂಕವನ್ನು ಮೂಡಿಸಿದೆ.