ಮಂಗಳೂರು : ಕೊರೊನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಆತಂಕಕ್ಕೆ ದೂಡಿದೆ. ಕರಾಯದ ಯುವಕನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಆದರೆ ವಿದೇಶದಿಂದ ಬಂದಿದ್ದ ಕರಾಯದ ಯುವಕ ಹೋಮ್ ಕ್ವಾರಂಟೈನ್ ಪಾಲನೆ ಮಾಡಿಲ್ಲಾ ಅನ್ನೋ ಮಾಹಿತಿ ಇದೀಗ ಹೊರಬಿದ್ದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ಕೊರೊನಾ ಮಹಾಮಾರಿಯ ವಿರುದ್ದ ಎಲ್ಲೆಡೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಹೋಮ್ ಕ್ವಾರಂಟೈನ್ ಪಾಲಿಸೋ ನಿಟ್ಟಿನಲ್ಲಿ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದ್ರೀಗ ಕರಾಯದ ಯ ಕೊರೊನಾ ಸೋಂಕು ಪೀಡಿತ ಕ್ವಾರಂಟೈನ್ ಸರಿಯಾಗಿ ಪಾಲಿಸಿಲ್ಲ ಅನ್ನುವ ಮಾಹಿತಿ ಬಯಲಾಗಿದೆ. ಮಾರ್ಚ್ 21ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ ಯುವಕ ಬೆಂಗಳೂರಿನಿಂದ ಕರಾಯಕ್ಕೆ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದಾನೆ.

ವಿದೇಶಕ್ಕೆ ಬಂದಿದ್ದ ಕರಾಯದ ಯುವಕ ಹೋಮ್ ಕ್ವಾರಂಟೈನ್ ಪಾಲನೆ ಮಾಡಿಲ್ಲ. ಎರಡು ದಿನಗಳ ಕಾಲ ಕ್ರಿಕೆಟ್ ಆಡುವುದಕ್ಕೆ ಹೋಗಿದ್ದಾನೆ. ಮಾತ್ರವಲ್ಲ ಸಭೆ, ಸಮಾರಂಭಗಳಲ್ಲಿಯೂ ಪಾಲ್ಗೊಂಡಿದ್ದಾನೆ. ಸುಮಾರು 300 ಮನೆಗಳ ಪೈಕಿ ಬಹುತೇಕ ಮನೆಗಳಿಗೂ ಈತ ಭೇಟಿ ಕೊಟ್ಟಿದ್ದಾನೆ. ಇನ್ನು ಕೆಲಸದ ನಿಮಿತ್ತ ಪುತ್ತೂರಿಗೆ ಹೋಗಿ ಬಂದಿದ್ದ, ಕರಾಯ ಪೇಟೆಯಲ್ಲಿಯೂ ಸುತ್ತಾಡಿದ್ದಾನೆ ಅನ್ನೋ ಮಾಹಿತಿಯನ್ನು ಸ್ಥಳೀಯರು ನೀಡಿದ್ದಾರೆ.

ವಿದೇಶದಿಂದ ಬಂದಾಗ ಆರಾಮಾಗಿಯೇ ಇದ್ದ ಯುವಕನಿಗೆ ಗ್ರಾಮಸ್ಥರು ಮನೆಯಲ್ಲಿಯೇ ಇರುವಂತೆ ಹೇಳಿದ್ರು. ಆದರೆ ಕೊರೊನಾ ತನಗೆ ಬರೋದಿಲ್ಲಾ ಅಂತಾ ಯುವಕ ಅಸಡ್ಡೆ ಮಾಡಿದ್ದಾರೆ. ಆದರೆ ಮಾರ್ಚ್ 23ರಂದು ಜ್ವರ ಕಾಣಿಸಿಕೊಂಡ ನಂತರದಲ್ಲಿಯೂ ಯುವಕ ನಿರ್ಲಕ್ಷ್ಯವನ್ನು ವಹಿಸಿದ್ದಾನೆ. ಮನೆಗೆ ಬಂದಿದ್ದ ಆಶಾ ಕಾರ್ಯಕರ್ತೆಯರಿಗೆ ಈ ವಿಚಾರ ತಿಳಿದು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊನೆಗೆ ಯುವಕನಿಗೆ ಮಾರ್ಚ್ 27ರಂದು ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ಯುವಕನ ನಿರ್ಲಕ್ಷ್ಯದಿಂದಾಗಿ ಕರಾಯದ ಗ್ರಾಮಸ್ಥರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಹಲವರು ಜ್ವರದಿಂದ ಬಳಲುತ್ತಿದ್ರೂ ಆಸ್ಪತ್ರೆಗೆ ಹೋಗಲು ಭಯಪಡುತ್ತಿದ್ದಾರೆನ್ನಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಕರಾಯದ ಯುವಕನ ಜೊತೆಗೆ ಸಂಪರ್ಕವನ್ನು ಹೊಂದಿರುವ ಗ್ರಾಮಸ್ಥರನ್ನು ತಪಾಸಣೆಗೆ ಒಳಪಡಿಸಬೇಕಾದ ಅನಿವಾರ್ಯತೆಯಿದೆ. ಕೊರೊನಾ ಸೋಂಕಿನ ಮುನ್ನೆಚ್ಚರಿಕೆಯ ಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ನಗರ ಭಾಗಗಳಲ್ಲಿನ ಜನತೆ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ಆದರೆ ಗ್ರಾಮೀಣ ಭಾಗಗಳಲ್ಲಿ ನಿಯಮ ಅಷ್ಟಾಗಿ ಪಾಲನೆಯಾಗುತ್ತಿಲ್ಲ ಅನ್ನೋ ಆರೋಪ ಕೇಳಿಬರುತ್ತಿದೆ. ಕರಾಯ ಯುವಕನಿಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆಯೇ ಜಿಲ್ಲಾಡಳಿತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಕರಾಯ ಸಂಪರ್ಕಿಸುವ ರಸ್ತೆಯನ್ನು ಸ್ಥಗಿತಗೊಳಿಸಿ ಗೇಟ್ ಅಳವಡಿಸಿದೆ. ಆದರೆ ಯುವಕ ಟ್ರಾವೆಲ್ ಹಿಸ್ಟರಿಯ ಆಧರಿಸಿ ಗ್ರಾಮದಲ್ಲಿ ಮುನ್ನೆಚ್ಚರಿಕೆಯನ್ನು ವಹಿಸಬೇಕೆಂಬ ಮಾತುಗಳು ಕೇಳಿಬರುತ್ತಿವೆ.