
ನವದೆಹಲಿ : ದೇಶದಲ್ಲಿ ಕೊರೊನಾ ಹೆಮ್ಮಾರಿಯ ಆರ್ಭಟ ಜೋರಾಗಿದೆ. ಕಳೆದೆಂಟು ದಿನಗಳ ಅವಧಿಯಲ್ಲಿ ಭಾರತದಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಹೊಸ ಕೇಸ್ ಗಳು ಪತ್ತೆಯಾಗಿದ್ದು, ನಿನ್ನೆ ಒಂದೇ ದಿನ ಬರೋಬ್ಬರಿ 70 ಸಾವಿರ ಹೊಸ ಪ್ರಕರಣಗಳು ದಾಖಲಾಗಿದೆ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಮರಣ ಮೃದಂಗವನ್ನು ಬಾರಿಸುತ್ತಿರುವ ಕೊರೊನಾ ವೈರಸ್ ಸೋಂಕು ಭಾರತದಲ್ಲಿಯೂ ದಿನೇ ದಿನೇ ಹೆಚ್ಚುತ್ತಲೇ ಇದೆ. ಮೇ 18ರ ಸುಮಾರಿಗೆ ದೇಶದಲ್ಲಿ ಕೇವಲ 1 ಲಕ್ಷ ಸೋಂಕಿತರಿದ್ದು, ಕೇವಲ ಮೂರೇ ಮೂರು ತಿಂಗಳಲ್ಲಿ ಸೋಂಕಿತರ ಸಂಖ್ಯೆ ಬರೋಬ್ಬರಿ 30 ಲಕ್ಷಕ್ಕೆ ಏರಿಕೆಯನ್ನು ಕಂಡಿದೆ.

ಇತ್ತೀಚಿನ ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಡುತ್ತಿದೆ. ಮಾರ್ಚ್ ತಿಂಗಳಿನಲ್ಲಿಯೇ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೂ ಕೂಡ ಸೋಂಕು 5 ಲಕ್ಷಕ್ಕೆ ಏರಿಕೆಯಾಗಲು 39 ದಿನಗಳನ್ನು ತೆಗೆದುಕೊಂಡಿದ್ದ ಹೆಮ್ಮಾರಿ, ದಿನೇ ದಿನೇ ಹೆಚ್ಚುತ್ತಲೇ ಇದೆ.

39 ದಿನಗಳಲ್ಲಿ 5 ಲಕ್ಷ ದಾಟಿದ್ದ ಸೋಂಕಿತರ ಸಂಖ್ಯೆ ಕೇವಲ 20 ದಿನಗಳಲ್ಲಿ 10 ಲಕ್ಷಕ್ಕೆ ಏರಿಕೆಯನ್ನು ಕಂಡಿತ್ತು. ಅಲ್ಲದೇ12 ದಿನಗಳ ಅವಧಿಯಲ್ಲಿ ಸೋಂಕು 15ಕ್ಕೆ ಏರಿಕೆಯಾಗಿದೆ. ಆದರೆ 20 ಲಕ್ಷಕ್ಕೆ ಏರಿಕೆಯಾಗಲು ತೆಗೆದುಕೊಂಡಿದ್ದು ಕೇವಲ 9 ದಿನಗಳು. ಅಲ್ಲದೇ ಕೇವಲ 8 ದಿನಗಳ ಅವಧಿಯಲ್ಲಿ ಮತ್ತೆ 5 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ದೇಶದಲ್ಲಿ ಇದುವರೆಗೆ 30.66 ಲಕ್ಷ ಮಂದಿಗೆ ಕೊರೊನಾ ಸೋಂಕು ದೃಢ್ಟಪಟ್ಟಿದ್ದು, 57 ಸಾವಿರ ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದವರ ಪೈಕಿ 22.96 ಲಕ್ಷ ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ.

ಒಂದೆಡೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದರೂ ಕೂಡ ಇನ್ನೊಂದೆಡೆ ಸೋಂಕಿಗೆ ತುತ್ತಾದವರು ಕೂಡ ಬಹುಬೇಗನೆ ಗುಣಮುಖರಾಗುತ್ತಿರುವುದು ಕೊಂಚ ಸಮಾಧಾನವನ್ನು ತಂದಿದೆ.