ಉಡುಪಿ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಲಿ : ಸಾಮಾಜಿಕ ಜಾಲತಾಣದಲ್ಲಿ ಶುರುವಾಯ್ತು ಹೋರಾಟ

0

ಉಡುಪಿ : ಕರಾವಳಿಯ ಜಿಲ್ಲೆಗಳಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿತ್ತು. ಉಡುಪಿ ಜಿಲ್ಲೆಯಲ್ಲಿ 5 ಕ್ಷೇತ್ರಗಳಲ್ಲಿಯೂ ಬಿಜೆಪಿ ಶಾಸಕರೇ ಆಯ್ಕೆಯಾಗಿದ್ದರು. ಆದ್ರೆ ಜಿಲ್ಲೆಯ ಉಸ್ತುವಾರಿ ಸಚಿವರ ಹೊಣೆಯನ್ನು ಹೊರ ಜಿಲ್ಲೆಯವರಿಗೆ ನೀಡಿರುವುದು ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲ ಉಡುಪಿ ಜಿಲ್ಲೆಯ ನಾಯಕರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕೆಂಬ ಕೂಗು ಕೇಳಿಬಂದಿದೆ.

ಗೃಹ ಸಚಿವರಾಗಿರುವ ಬಸವರಾಜ್ ಬೊಮ್ಮಾಯಿ ಸದ್ಯ ಉಡುಪಿ ಜಿಲ್ಲೆಯ ಉಸ್ತುವಾರಿ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಉಸ್ತುವಾರಿ ಸಚಿವರಾಗಿ ಬೊಮ್ಮಾಯಿ ಆಯ್ಕೆಯಾಗಿದ್ದರೂ ಕೂಡ ಕಳೆದೊಂದು ವರ್ಷದ ಅವಧಿಯಲ್ಲಿ ಅವರು ಉಡುಪಿ ಜಿಲ್ಲೆಗೆ ಭೇಟಿಕೊಟ್ಟಿದ್ದು ತೀರಾ ಕಡಿಮೆ. ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ಒಂದೆಡೆ ಕಾಡುತ್ತಿದ್ರೆ, ಇನ್ನೊಂದಡೆ ಕೊರೊನಾ ಹೆಮ್ಮಾರಿಯ ಆರ್ಭಟ ಜೋರಾಗಿದೆ. ಜಿಲ್ಲೆಯ ಜನತೆ ಕೊರೊನಾ ಸಂಕಷ್ಟದಿಂದ ತತ್ತರಿಸಿದ್ದರೆ ಬೊಮ್ಮಾಯಿ ಅವರು ಮಾತ್ರ ಬೆಂಗಳೂರಿನಲ್ಲಿಯೇ ಉಳಿದುಕೊಂಡು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾಹಿತಿ ಪಡೆಯುವ ಕಾರ್ಯವನ್ನು ಮಾಡುತ್ತಿದ್ದಾರೆ. ಕಾಟಾಚಾರಕ್ಕೆಂಬಂತೆ ಜಿಲ್ಲೆಗೆ ಆಗಮಿಸುತ್ತಿರೋದು ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರಕ್ಕೂ ಅಧಿಕವಿದೆ. ಮಾತ್ರವಲ್ಲ ದಿನ ನಿತ್ಯವೂ ಸರಾಸರಿ 200ಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ನಡುವಲ್ಲೇ ಕೊರೊನಾ ಹೆಸರಲ್ಲಿ ಅಧಿಕಾರಿಗಳು ದಂಧೆ ನಡೆಸುತ್ತಿದ್ದಾರೆ ಅನ್ನುವ ಆರೋಪ ಕೇಳಿಬರುತ್ತಿದೆ. ಖಾಸಗಿ ಆಸ್ಪತ್ರೆಗಳು ಕೊರೊನಾ ಹೆಸರಲ್ಲಿ ನಡೆಸುತ್ತಿರುವ ಲೂಟಿಯನ್ನು ತಡೆಯೋದಕ್ಕೆ ಜಿಲ್ಲಾಡಳಿತದಿಂದಲೂ ಸಾಧ್ಯವಾಗುತ್ತಿಲ್ಲ.

ಈ ನಡುವಲ್ಲೇ ಮಹಿಳೆಯೋರ್ವರ ಸಾವಿನ ಪ್ರಕರಣ ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದ್ರೆ. ಕುಂದಾಪುರದಲ್ಲಿ ನಡೆದ ಕೊರೊನಾ ಸೋಂಕಿತರ ಶವ ಅದಲು ಬದಲು ಮಾಡಿದ ಪ್ರಕರಣ ಜನರ ಅನುಮಾನಕ್ಕೆ ಕಾರಣವಾಗಿದೆ. ದುರಂತವೆಂದ್ರೆ ಜನರ ಸಮಸ್ಯೆಯನ್ನು ಆಲಿಸಬೇಕಾದ ಉಸ್ತುವಾರಿ ಸಚಿವರು ಮಾತ್ರ ಜಿಲ್ಲೆಯತ್ತ ಆಗಮಿಸಿಯೇ ಇಲ್ಲ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 5 ಮಂದಿ ಶಾಸಕರಿದ್ದಾರೆ. ಈ ಪೈಕಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಹಿರಿಯ ಶಾಸಕರಾಗಿದ್ದು, ಸಚಿವರಾಗುವ ಎಲ್ಲಾ ಅರ್ಹತೆ ಹೊಂದಿದ್ದರೂ ಕೂಡ ಬಿಜೆಪಿ ಸರಕಾರ ಯಾರಿಗೂ ಸಚಿವ ಸ್ಥಾನವನ್ನು ನೀಡಿಲ್ಲ.

ಇನ್ನು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಿದ್ದರೂ ಖುಡ, ಅವರನ್ನು ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳೇ ಉಸ್ತುವಾರಿ ಸಚಿವರಾಗಿದ್ರೆ ಜನರು ತಮ್ಮ ಸಮಸ್ಯೆಗೆ ಬಹುಬೇಗನೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಅನ್ನುತ್ತಿದ್ದಾರೆ ಜಿಲ್ಲೆಯ ಜನರು.

ಜಿಲ್ಲೆಯವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವ ಕುರಿತು ಈಗಾಗಲೇ ಪತ್ರಕರ್ತ ವಸಂತ ಗಿಳಿಯಾರ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ರೆ, ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಹೋರಾಟ ಶುರುವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ತರಾಟಗೆಗೆ ತೆಗೆದುಕೊಳ್ಳುತ್ತಿದ್ದಾರೆ. ಜನರ ಆಕ್ರೋಶ ಇನ್ನಷ್ಟು ಹೆಚ್ಚಿ ಬೀದಿಗಿಳಿಯೋ ಮುನ್ನ ಬಿಜೆಪಿ ಸರಕಾರ ಜಿಲ್ಲೆಯ ಜನಪ್ರತಿನಿಧಿಗಳನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದಾರೆ.

ಹಲವು ವರ್ಷಗಳಿಂದಲೂ ಹೊರ ಜಿಲ್ಲೆಯ ನಾಯಕರೇ ಜಿಲ್ಲಾ ಉಸ್ತುವಾರಿ ಸಚಿವರ ಹೊಣೆಯನ್ನು ಹೊತ್ತಿದ್ದಾರೆ. ಇದೀಗ ಬಿಜೆಪಿ ಸರಕಾರದ ಅವಧಿಯಲ್ಲಿಯೂ ಅದೇ ಸ್ಥಿತಿ ಪುನರಾವರ್ತನೆಯಾಗಿದೆ. ನಾಮಕಾವಸ್ತೆಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುವ ಬದಲು ಜಿಲ್ಲೆಯಲ್ಲಿರುವ ಸಮರ್ಥ ನಾಯಕರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕ್ರಮಕೈಗೊಳ್ಳಬೇಕಿದೆ.

Leave A Reply

Your email address will not be published.