ಉಡುಪಿ : ಕಳೆದೆರಡು ದಿನಗಳಿಂದ ಉಡುಪಿಯಲ್ಲಿ ಕೊರೊನಾ ಪ್ರಕರಣ ದಾಖಲಾಗಿಲ್ಲ. ಹಾಗಂತ ಉಡುಪಿ ಜಿಲ್ಲೆಯ ಜನತೆ ಖುಷಿಯಾಗಿ ಇರುವಂತಿಲ್ಲ. ಯಾಕೆಂದ್ರೆ ಮಹಾರಾಷ್ಟ್ರದಿಂದ ಎರಡನೇ ಹಂತದಲ್ಲಿ ಜಿಲ್ಲೆಗೆ ಬರೋದಕ್ಕೆ ಬರೋಬ್ಬರಿ 8,000 ಮಂದಿ ಸಿದ್ದರಾಗಿದ್ದಾರೆ. ಹೀಗಾಗಿ ಜಿಲ್ಲೆಗೆ ಕೊರೊನಾ ಸೆಕೆಂಡ್ ಎಫೆಕ್ಟ್ ತಟ್ಟೋದು ಗ್ಯಾರಂಟಿ.

ಉಡುಪಿ… ಒಂದು ಬಾರಿ ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಿ ಗ್ರೀನ್ ಝೋನ್ ವ್ಯಾಪ್ತಿಗೆ ಒಳಪಟ್ಟಿತ್ತು. ಆದ್ರೆ ಕೆಲವೇ ದಿನಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಕೊರೊನಾ ಸೋಂಕಿತರನ್ನು ಹೊಂದುವ ಮೂಲಕ ರಾಜ್ಯದಲ್ಲಿಯೇ ಮೊದಲ ಸ್ಥಾನಕ್ಕೇರಿದೆ. ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ 1000 ಅಂಚಿಗೆ ಬಂದು ನಿಂತಿದೆ. ಆದ್ರೆ ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಸೋಂಕಿತ ಪ್ರಕರಣ ಪತ್ತೆಯಾಗಿಲ್ಲ. ಹಾಗಂದ ಮಾತ್ರಕ್ಕೆ ಜನ ನಿಟ್ಟುಸಿರು ಬಿಡುವುದಕ್ಕೆ ಸಾಧ್ಯವೇ ಇಲ್ಲ.

ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೊರೊನಾ ಮಹಾಮಾರಿ ಇದೀಗ ಉಡುಪಿ ಜಿಲ್ಲೆಯ ಜನರಿಗೆ ಆತಂಕವನ್ನು ತಂದೊಡ್ಡುತ್ತಿದೆ. ಮೊದಲ ಹಂತದಲ್ಲಿ ಜಿಲ್ಲೆಗೆ ಬಂದಿದ್ದ ಸುಮಾರು 8000 ಮಂದಿಯಲ್ಲಿ ಬರೋಬ್ಬರಿ 900ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇಂದಿಗೂ 619 ಮಂದಿ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. 1 ಸಾವಿರಕ್ಕೂ ಅಧಿಕ ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಈ ನಡುವಲ್ಲೇ ಎರಡನೇ ಹಂತದಲ್ಲಿ ಮತ್ತೆ 8000ಕ್ಕೂ ಅಧಿಕ ಮಂದಿ ಜಿಲ್ಲೆಗೆ ಆಗಮಿಸಲು ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಜ್ಯ ಸರಕಾರ ಕೂಡ ಕ್ವಾರಂಟೈನ್ ಬದಲು ಹೋಮ್ ಕ್ವಾರಂಟೈನ್ ಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಮೊದಲ ಹಂತದಲ್ಲಿ ಜಿಲ್ಲೆಗೆ ಆಗಮಿಸಿದ್ದವರ ಪೈಕಿ ಶೇ.15 ರಷ್ಟು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಮತ್ತೆ ಜಿಲ್ಲೆಗೆ ಆಗಮಿಸುವವರಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ಶೇ.10ರಷ್ಟು ಮಂದಿಗೆ ಕೊರೊನಾ ಸೋಂಕು ದೃಢಪಟ್ಟರೆ ಜಿಲ್ಲೆಯೊಂದರಲ್ಲೇ ಸೋಂಕಿರ ಸಂಖ್ಯೆ 2,000ದ ಗಡಿದಾಟುವ ಸಾಧ್ಯತೆಯಿದೆ.

ಜೊತೆಗೆ ಜುಲೈ ತಿಂಗಳಲ್ಲೇ ಕೊರೊನಾ ಸೋಂಕು ವ್ಯಾಪಿಸುವ ಕುರಿತು ವೈದ್ಯಕೀಯ ಶಿಕ್ಷಣ ಸಚಿವರ ಡಾ.ಸುಧಾಕರ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯನ್ನು ನೀಡಿದೆ. ಈ ಹಿನ್ನೆಲೆಯಲ್ಲೀಗ ಆತಂಕ ಶುರುವಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗಾಗಿಯೇ 1000ಕ್ಕೂ ಅಧಿಕ ಬೆಡ್ ಗಳನ್ನು ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೇ ಖಾಸಗಿ ಆಸ್ಪತ್ರೆಗಳ ಸಹಕಾರವನ್ನು ಪಡೆದುಕೊಂಡಿದೆ. ಜಿಲ್ಲೆಯನ್ನು ಮತ್ತೆ ಗ್ರೀನ್ ಝೋನ್ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತಿದೆ. ಈ ನಡುವಲ್ಲೇ ಎರಡನೇ ಹಂತದಲ್ಲಿ ಮುಂಬೈನಿಂದ ಉಡುಪಿಗೆ ಸಾವಿರಾರು ಮಂದಿ ಆಗಮಿಸುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತರಿಸಿದೆ.