ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಆದೇಶಿಸಿರುವ ಸಂಡೇ ಲಾಕ್ ಡೌನ್ ಅನ್ನು ಉಡುಪಿ ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಆಚರಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಅಗತ್ಯ ಸೇವೆಗಳಾದ ಮೆಡಿಕಲ್, ಆಸ್ಪತ್ರೆ ಸೇರಿದಂತೆ ವೈದ್ಯಕೀಯ ಸೇವೆ ಹೊರತು ಪಡಿಸಿ ಹಾಲು, ಪೇಪರ್ ಮಾರಾಟಕ್ಕೆ ಮಾತ್ರವೇ ಅನುಮತಿಯನ್ನು ನೀಡಲಾಗಿದೆ. ಉಳಿದಂತೆ ಯಾವುದೇ ರೀತಿಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಅನಗತ್ಯವಾಗಿ ತಿರುಗಾಡಿದ್ರೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಲ್ಲದೇ ಅಂತಹವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದಿದ್ದಾರೆ.

ಇನ್ನು ಪೂರ್ವ ನಿಗದಿಯಾಗಿದ್ದ ಮದುವೆ ಸಮಾರಂಭವನ್ನು ನಡೆಸಬಹುದಾಗಿದೆ. ಆದರೆ ಮದುವೆ ಸಮಾರಂಭವನ್ನು ನಡೆಸುವ ಕುರಿತು ತಹಶೀಲ್ದಾರರಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕು. ಅಲ್ಲದೇ 50 ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಭಾನುವಾರ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರು ಬೇಕಾದ ಸಾಮಗ್ರಿಗಳನ್ನು ಇಂದೇ ಖರೀದಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.