ಉಡುಪಿ : ಕೊರೊನಾ ಮುಕ್ತವಾಗಿದ್ದ ಉಡುಪಿ ಜಿಲ್ಲೆಯಲ್ಲೀಗ ಕೊರೊನಾ ಸೋಂಕು ಅಟ್ಟಹಾಸವನ್ನು ಮೆರೆಯುತ್ತಿದೆ. ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ ಶತಕದಾಟಿದೆ. ಅದ್ರಲ್ಲೂ 5,000 ಕ್ಕೂ ಅಧಿಕ ಮಂದಿಯ ತಪಾಸಣಾ ವರದಿ ಇನ್ನಷ್ಟೇ ಬರಬೇಕಾಗಿದ್ದು, ಆತಂಕ ಮೂಡಿಸಿದೆ.

ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಲೇ ಅಲರ್ಟ್ ಆಗಿದ್ದ ಜಿಲ್ಲಾಡಳಿತ ಕೆಲವೇ ದಿನಗಳಲ್ಲಿ ಕೊರೊನಾ ಮುಕ್ತವಾಗಿತ್ತು. ಮಾತ್ರವಲ್ಲ ಗ್ರೀನ್ ಝೋನ್ ವ್ಯಾಪ್ತಿಗೂ ಸೇರ್ಪಡೆಯಾಗಿತ್ತು. ಆದ್ರೆ ಮುಂಬೈ ನಂಜು ಕೃಷ್ಣನಗರಿಯನ್ನು ಇನ್ನಿಲ್ಲದಂತೆ ಕಾಡುತ್ತಿದೆ. ವಿದೇಶಿಗರು ಹಾಗೂ ಮುಂಬೈವಾಸಿಗಳಿಂದಲೇ ಜಿಲ್ಲೆಯಲ್ಲೀಗ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದೀಚೆಗೆ ಕೊರೊನಾ ಪೀಡಿತರ ಸಂಖ್ಯೆ 108ಕ್ಕೆ ತಲುಪಿದೆ.

ಮುಂಬೈನಿಂದ 6,000ಕ್ಕೂ ಅಧಿಕ ಮಂದಿ ಆಗಮಿಸಿದ್ದಾರೆ. ಈ ಪೈಕಿ ಕೆಲವರ ವರದಿ ಮಾತ್ರವೇ ಬಂದಿದ್ದು, ಇನ್ನೂ 3,500 ಮಂದಿಯ ಕೊರೊನಾ ತಪಾಸಣಾ ವರದಿ ಇನ್ನಷ್ಟೇ ಬರಬೇಕಾಗಿದೆ. ಅಷ್ಟೇ ಅಲ್ಲಾ 2,500ಕ್ಕೂ ಅಧಿಕ ಮಂದಿಯನ್ನು ಇನ್ನಷ್ಟೇ ತಪಾಸಣೆಗೆ ಒಳಪಡಿಸಬೇಕಿದೆ. ಜೊತೆಗೆ ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರ ಗಂಟಲು ದ್ರವದ ಪರೀಕ್ಷೆ ಇನ್ನಷ್ಟೇ ನಡೆಸಬೇಕಾಗಿರುವುದರಿಂದ ಉಡುಪಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 5,000ಕ್ಕೂ ಮಿಕ್ಕಿದವರ ವರದಿಯನ್ನು ನಿರೀಕ್ಷಿಸಲಾಗಿದೆ.

ಈಗಾಗಲೇ ತಪಾಸಣೆಗೆ ಒಳಪಡಿಸಿದವರ ಪೈಕಿ ಶೇ.10ರಷ್ಟು ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿದ್ರೆ ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸುವ ಸಾಧ್ಯತೆಯಿದೆ. ಈಗಾಗಲೇ ಕೊರೊನಾ ಸೋಂಕು ಕಾಣಿಸಿಕೊಂಡವರನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ರೆ, ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಜಿಲ್ಲಾಡಳಿತ ಕ್ವಾರಂಟೈನ್ ಗೆ ಒಳಪಡಿಸಿದೆ.

ಜಿಲ್ಲೆಯಲ್ಲಿ 4 ಮಂದಿ ಪೊಲೀಸರಿಗೂ ಮಹಾಮಾರಿ ಒಕ್ಕರಿಸಿದ್ದು, 4 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಜಿಲ್ಲಾ ಪಂಚಾಯತ್ ಸಿಬ್ಬಂಧಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ವ್ಯಾಪಿಸುತ್ತಿರುವುದು ಕರಾವಳಿಗರಿಗೆ ಆತಂಕವನ್ನು ತಂದೊಡ್ಡಿದೆ.