ಕೊರೊನಾ ನಡುವಲ್ಲೇ ಪಿಜಿಗಳು ಓಪನ್ : ಪ್ರತೀ ರೂಮಿಗೂ ಬಾತ್ ರೂಮ್, ಟಾಯ್ಲೆಟ್ ಕಡ್ಡಾಯ !

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ 4ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಆದರೆ ಬೆಂಗಳೂರು ನಗರದಲ್ಲಿ ಪಿಜಿಗಳನ್ನು ತೆರೆಯಲು ರಾಜ್ಯ ಸರಕಾರ ಷರತ್ತುಬದ್ದ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ನಗರದ ಪಿಜಿಗಳು ಓಪನ್ ಆಗೋದು ಖಚಿತ. ಆದರೆ ಪ್ರತೀ ರೂಮಿನಲ್ಲಿಯೂ ಬಾತ್ ರೂಂ ಹಾಗೂ ಟಾಯ್ಲೆಟ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಸೂಚಿಸಿದ್ದು, ರಾಜ್ಯ ಸರಕಾರ ಈ ಕುರಿತು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಬಸ್ ಸಂಚಾರ ಆರಂಭಗೊಂಡಿದೆ. ತವರಿಗೆ ಮರಳಿದ್ದ ಜನರು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಈ ನಡುವಲ್ಲೇ ಕಳೆದ ಮೂರು ದಿನಗಳಿಂದಲೂ ಪಿಜಿಗಳ ಮಾಲೀಕರು ರಾಜ್ಯ ಸರಕಾರಕ್ಕೆ ಬೇಡಿಕೆಯಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹಲವು ಷರತ್ತುಗಳನ್ನು ವಿಧಿಸಿ ಪಿಜಿಗಳನ್ನು ಓಪನ್ ಮಾಡಲು ಅನುಮತಿ ನೀಡಿದೆ. ಷರತ್ತುಗಳನ್ನು ಪಾಲನೆ ಮಾಡದಿದ್ರೆ ಕ್ರಮಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ.

ರಾಜ್ಯ ಸರಕಾರದ ಮಾರ್ಗಸೂಚಿಯಲ್ಲೇನಿದೆ ?

  1. ಪ್ರತಿ ಬೆಡ್ ಗಳ ನಡುವೆ ಕನಿಷ್ಠ 2 ಮೀಟರ್ ಅಂತರವಿರಲೇ ಬೇಕು.
  2. ಪ್ರತಿ ರೂಮ್ ಗೆ ಅಟ್ಯಾಚ್ ಆಗಿ ಬಾತ್ ರೂಮ್ ಹಾಗೂ ಕಡ್ಡಾಯವಾಗಿ ಟಾಯ್ಲೇಟ್ ವ್ಯವಸ್ಥೆಯನ್ನು ಕಲ್ಪಿಸಲೇ ಬೇಕು.
  3. ಪ್ರತಿನಿತ್ಯವೂ ಪಿಜಿಯಲ್ಲಿರುವ ಪ್ರತೀ ರೂಮ್ ಗಳ ಒಳಗೆ ಹಾಗೂ ಹೊರಗೆ ಸ್ಯಾನಿಟೈಸಿಂಗ್ ಮಾಡಲೇಬೇಕು.
  4. ಪಿಜಿಯಲ್ಲಿರುವವರು ಬಳಕೆ ಮಾಡುವ ಬಟ್ಟೆಗಳನ್ನು ಪ್ರತೀ ನಿತ್ಯವೂ ತೊಳೆಯಲು ವ್ಯವಸ್ಥೆಯನ್ನು ಕಲ್ಪಿಸಬೇಕು.
  5. ಪಿಜಿಯಲ್ಲಿ ವಾಸವಿರುವ ಯಾವುದೇ ವ್ಯಕ್ತಿಗೆ ಸೋಂಕಿನ ಲಕ್ಷಣ ಕಂಡುಬಂದ್ರೆ ಡಿಹೆಚ್ಓಗೆ ಕಡ್ಡಾಯವಾಗಿ ಮಾಹಿತಿ ನೀಡಲೇಬೇಕು
  6. ಪಿಜಿಯಲ್ಲಿರುವ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟರೆ, ಇಡೀ ಕಟ್ಟಡವನ್ನು ಸ್ಯಾನಿಟೈಸ್ ಮಾಡಬೇಕು.
  7. ಒಂದೊಮ್ಮೆ ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಪತ್ತೆಯಾದ್ರೆ ಮುಂದಿನ 24 ಗಂಟೆಗಳ ಕಾಲ ಪಿಜಿಯನ್ನು ಖಾಲಿ ಬಿಡಬೇಕು.
  8. ಯಾವುದೇ ಕಾರಣಕ್ಕೂ ಪಿಜಿಗಳಲ್ಲಿ ಎಸಿಯನ್ನು ಬಳಕೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.
  9. ಪಿಜಿಯಲ್ಲಿರುವ ಪ್ರತೀ ರೂಮ್ ಗೆ ಗಾಳಿ ಮತ್ತು ಬೆಳಕು ಸರಾಗವಾಗಿ ಬರುವಂತೆ ವ್ಯವಸ್ಥೆ ಕಲ್ಪಿಸಿರಬೇಕು.

ಕೊರೊನಾ ಸೋಂಕಿನಿಂದ ದೂರವಿರಲು ಸಾಮಾಜಿಕ ಅಂತರ ಕಡ್ಡಾಯವಾಗಿರುತ್ತದೆ. ಸಾಮಾನ್ಯವಾಗಿ ಪಿಜಿಗಳಲ್ಲಿ ನೂರಾರು ಮಂದಿ ಒಟ್ಟಿಗೆ ಇರುವುದರಿಂದ ಸೋಂಕಿತ ವ್ಯಕ್ತಿಗಳು ಸೀನಿದಾಗ, ಕೆಮ್ಮಿದಾಗ ಸೋಂಕು ಬಹುಬೇಗನೆ ವ್ಯಾಪಿಸೋ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಪ್ರತೀ ಪಿಜಿಗಳ ಮೇಲೆಯೂ ಆರೋಗ್ಯ ಇಲಾಖೆ ಹದ್ದಿನಕಣ್ಣಿಟ್ಟಿದೆ. ಆರೋಗ್ಯ ಇಲಾಖೆ ಪಿಜಿಗಳಲ್ಲಿ ಮಾರ್ಗಸೂಚಿಯನ್ನು ಅಳವಡಿಸುವಂತೆ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಅದರಂತೆ ರಾಜ್ಯ ಸರ್ಕಾರ ಈ ಷರತ್ತುಗಳನ್ನು ವಿಧಿಸಿ ಈಗ ಅನುಮತಿ ನೀಡಿದೆ.

Leave A Reply

Your email address will not be published.