ಬೆಂಗಳೂರು : ರಾಜ್ಯದಲ್ಲಿಂದು ಕೊರೊನಾ ರಣಕೇಕೆ ಹಾಕಿದೆ. ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಕೃಷ್ಣ ನಗರಿ ಉಡುಪಿ ಬೆಚ್ಚಿಬಿದ್ದಿದೆ. ಉಡುಪಿಯಲ್ಲಿಂದು ಒಂದೇ ದಿನ ಬರೋಬ್ಬರಿ 73 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ರಾಜ್ಯದಲ್ಲಿಯೂ ಕೊರೊನಾ ಆರ್ಭಟ ಜೋರಾಗಿದ್ದು, 187 ಪ್ರಕರಣ ದಾಖಲಾಗಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 3,408ಕ್ಕೆ ಏರಿಕೆಯಾಗಿದೆ.

ಗ್ರೀನ್ ಝೋನ್ ವ್ಯಾಪ್ತಿಗೆ ಸೇರ್ಪಡೆಯಾಗಿದ್ದ ಉಡುಪಿ ಜಿಲ್ಲೆಯಲ್ಲೀಗ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ ಬರೋಬ್ಬರಿ 73 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ ದ್ವಶತಕ ದಾಟಿದೆ. ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದ್ದರೆ, ಸಕ್ರೀಯ ಪ್ರಕರಣಗಳ ಸಂಖ್ಯೆಯೇ 196 ಇದೆ.

ಸಿಲಿಕಾನ್ ಸಿಟಿ ಬೆಂಗಳೂರಿಗೂ ಕೊರೊನಾ ಮಹಾಮಾರಿ ಶಾಕ್ ಕೊಟ್ಟಿದೆ. ಬೆಂಗಳೂರಲ್ಲಿಂದು 28 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 385ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಅಗ್ರಸ್ಥಾನದಲ್ಲಿಯೇ ಮುನ್ನುಗ್ಗುತ್ತಿದೆ.

ಕಳೆದೊಂದು ವಾರದಿಂದಲೂ ಕಲಬುರಗಿಗೆ ಕೊರೊನಾ ಆತಂಕವನ್ನು ತಂದೊಡ್ಡಿದೆ. ಇಂದೂ ಕೂಡ ಜಿಲ್ಲೆಯಲ್ಲಿ 24 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಉಳಿದಂತೆ ಹಾಸನ ಜಿಲ್ಲೆಯಲ್ಲಿ 16 ಮಂದಿಗೆ ಕೊರೊನಾ ಸೋಂಕು ಪತ್ತೆಯಾದ್ರೆ, ಮಂಡ್ಯದಲ್ಲಿ 15, ಶಿವಮೊಗ್ಗದಲ್ಲಿ 9, ಚಿಕ್ಕಬಳ್ಳಾಪುರದಲ್ಲಿ 5, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4, ಬಳ್ಳಾರಿ 3, ಬೀದರ್ 2, ಬಾಗಲಕೋಟೆ 2, ಧಾರವಾಡ 2, ಹಾಗೂ ವಿಜಯಪುರ, ಕೋಲಾರ, ರಾಮನಗರ ಹಾಗೂ ಹಾವೇರಿಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿಂದು ದಾಖಲಾಗಿರುವ ಬಹುತೇಕ ಪ್ರಕರಣಗಳಲ್ಲಿ ಮುಂಬೈ ಹಾಗೂ ದುಬೈನಿಂದ ಬಂದವರೇ ಆಗಿದ್ದಾರೆ.

ಕೊರೊನಾ ಮಹಾಮಾರಿ ರಾಜ್ಯದಲ್ಲಿ ಮತ್ತೊಂದು ಬಲಿ ಪಡೆದಿದೆ. ಬೆಂಗಳೂರಿನಲ್ಲಿ 90 ವರ್ಷದ ವೃದ್ದರೋರ್ವರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು 110 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಕೊರೊನಾ ಸೋಂಕನ್ನ ಗೆದ್ದವರ ಸಂಖ್ಯೆ 1,328ಕ್ಕೆ ಏರಿಕೆಯಾಗಿದೆ.