ಉಡುಪಿಯಲ್ಲಿ 5 ಮಂದಿ ಸೋಂಕಿತರ ಮೊಬೈಲ್ ಸ್ವಿಚ್ ಆಫ್ : ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಗುತ್ತಿಲ್ಲ ಕೊರೊನಾ ಪೀಡಿತರು !

0

ಡುಪಿ : ಡೆಡ್ಲಿ ಕೊರೊನಾ ಮಹಾಮಾರಿ ಕೃಷ್ಣನಗರಿ ಉಡುಪಿಗೆ ಭರ್ಜರಿ ಶಾಕ್ ಕೊಟ್ಟಿದೆ. ಮುಂಬೈ, ದುಬೈ ಸೋಂಕು ಉಡುಪಿಯನ್ನು ಆತಂಕಕ್ಕೆ ದೂಡಿದೆ. ಸಶಸ್ತ್ರ ಮೀಸಲು ಪಡೆಯ ಡಿವೈಎಸ್ ಪಿ ಸೇರಿ ನಾಲ್ವರು ಪೊಲೀಸರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ ಜಿಲ್ಲೆಯಲ್ಲಿ ಐದು ಮಂದಿ ಕೊರೊನಾ ಸೋಂಕಿತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಗುತ್ತಿಲ್ಲ.

ಉಡುಪಿ ಜಿಲ್ಲೆಯಲ್ಲಿಂದು ಒಂದೇ ದಿನ ಬರೋಬ್ಬರಿ 73 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈ ಪೈಕಿ ಮುಂಬೈನಿಂದ ಬಂದಿದ್ದ 61 ಮಂದಿ ಹಾಗೂ ದುಬೈನಿಂದ ಬಂದಿದ್ದ 3 ಮಂದಿ ಸೇರಿ ಒಟ್ಟು 64 ಮುಂಬೈ, ದುಬೈನಿಂದ ಬಂದವರಿಂದಲೇ ಸೋಂಕು ಕಾಣಿಸಿಕೊಂಡಿದೆ. ಇನ್ನು ಸಶಸ್ತ್ರ ಮೀಸಲು ಪಡೆಯ ಹೇರ್ ಕಟ್ಟಿಂಗ್ ಮಾಡುತ್ತಿದ್ದ ಪೊಲೀಸ್ ಸಿಬ್ಬಂಧಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕಿತ ಭಾನುವಾರ ಹಿರಿಯ ಪೊಲೀಸ್ ಅಧಿಕಾರಿಗೆ ಹೇರ್ ಕಟ್ಟಿಂಗ್ ಮಾಡಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.

ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಅಲ್ಲದೇ ಪೊಲೀಸರು ಸಭೆ ನಡೆಸಿರುವ ಉಡುಪಿಯ ಡಿವೈಎಸ್ ಪಿ ಕಚೇರಿ ಹಾಗೂ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ ಪಿ ಸೇರಿದಂತೆ ನಾಲ್ವರು ಪೊಲೀಸರಿಗೆ ಸೋಂಕು ಖಚಿತವಾದ ಹಿನ್ನೆಲೆಯಲ್ಲಿ ಚಂದು ಮೈದಾನದಲ್ಲಿರುವ ಸಶಸ್ತ್ರ ಮೀಸಲು ಪಡೆಯು ಕಚೇರಿಯನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ.

ಉಡುಪಿಯಲ್ಲಿಂದು ಕೊರೊನಾ ಸೋಂಕು ದೃಢಪಟ್ಟಿರುವ 68 ಮಂದಿಯನ್ನು ಪತ್ತೆ ಹಚ್ಚಿ ಈಗಾಗಲೇ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ 5 ಮಂದಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಜಿಲ್ಲಾಡಳಿತದ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಅವರನ್ನು ಪತ್ತೆ ಹಚ್ಚುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ತಿಳಿಸಿದ್ದಾರೆ.

.

Leave A Reply

Your email address will not be published.