ಮಂಗಳೂರು : ಕರಾವಳಿಯಲ್ಲಿ ಕೊರೊನಾ ಅಟ್ಟಹಾಸ ಮೆರೆಯೋ ಸೂಚನೆ ನೀಡುತ್ತಿದೆ. ಮಂಗಳೂರಿನಲ್ಲಿ ಮತ್ತೆ 4 ಜನರಿಗೆ ಕೊರೊನಾ ಇರುವುದು ಇಂದು ದೃಢಪಟ್ಟಿದೆ. ಈ ಮೂಲಕ ಮಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಈ ಹಿಂದೆ ದುಬೈನಿಂದ ಆಗಮಿಸಿದ್ದ ಭಟ್ಕಳ ಮೂಲದ ವ್ಯಕ್ತಿಗೆ ಕೊರೊನಾ ದೃಢಪಟ್ಟಿತ್ತು. ದುಬೈನಿಂದ ಬಂದ ವ್ಯಕ್ತಿಯ ಜೊತೆಗೆ ಇಂದು ಕೊರೊನಾ ಸೋಂಕು ದೃಢಪಟ್ಟಿರುವ ಮೂವರು ಪ್ರಯಾಣಿಸಿದ್ದರು. ಈ ಮೂವರು ಕೂಡ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸೋಂಕು ದೃಢಪಟ್ಟಿರುವ ನಾಲ್ವರು ಕೂಡ ಕೇರಳ ನಿವಾಸಿಗಳಾಗಿದ್ದಾರೆ. ಇನ್ನೋರ್ವ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಭಟ್ಕಳ ಮೂಲದ ವ್ಯಕ್ತಿಯ ಜೊತೆಗೆ ಪ್ರಯಾಣಿಸಿದ್ದ ಎಲ್ಲಾ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡುವಂತೆ ಆರೋಗ್ಯ ಇಲಾಖೆ ಸೂಚನೆಯನ್ನು ನೀಡಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಕೊರೊನಾ ಸೊಂಕಿತ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಆತಂಕ ಎದುರಾಗಿದೆ. ಮಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇದೀಗ 5ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಕೊರೊನಾ ದೃಢಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾದಂತಾಗಿದೆ.