3 ವಾರ ಭಾರತವೇ ಲಾಕ್ ಡೌನ್ : ಪ್ರಧಾನಿ ನರೇಂದ್ರ ಮೋದಿ ಘೋಷಣೆ

0

ನವದೆಹಲಿ : ವಿಶ್ವದಾದ್ಯಂತ ಮಿತಿಮೀರುತ್ತಿರೋ ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಇಡೀ ದೇಶವನ್ನೇ ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಎಪ್ರೀಲ್ 14ರ ವರೆಗೆ ದೇಶ ಸುಮಾರು 21 ದಿನಗಳ ಕಾಲ ಲಾಕ್ ಡೌನ್ ಆಗಲಿದೆ. ಕೊರೊನಾ ವಿರುದ್ದ ವಿಶ್ವದಾದ್ಯಂತ ಹೋರಾಟ ನಡೆಯುತ್ತಿದೆ. ಎಲ್ಲರೂ ಮನೆಯಲ್ಲಿಯೇ ಇರಿ, ಮನೆಯ ಬಾಗಿಲಿಗೆ ಲಕ್ಷ್ಮಣ ರೇಖೆಯನ್ನು ಹಾಕಿಕೊಳ್ಳಿ, ನೀವು ಹೊರಗಿಡುವ ಪ್ರತೀ ಹೆಜ್ಜೆ ಕೂಡ ಕೊರೊನಾವನ್ನು ತಂದಿಡಬಹುದು. ಮನೆಯಲ್ಲಿಯೇ ಇದ್ದು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರೀಯವಾಗಿರಿ ಎಂದಿದ್ದಾರೆ.
ಚೀನಾ, ಇಟಲಿ, ಅಮೇರಿಕಾ, ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಅಮೇರಿಕಾ, ಇಟಲಿಯಂತಹ ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ಅಳವಡಿಸಿಕೊಂಡಿರುವ ದೇಶಗಳಲ್ಲಿಯೂ ಕೊರೊನಾಕ್ಕೆ ಬ್ರೇಕ್ ಬಿದ್ದಿಲ್ಲ. ಕೊರೊನಾಕ್ಕೆ ಬ್ರೇಕ್ ಹಾಕಲು ಇರುವ ಒಂದೇ ಒಂದು ದಾರಿ,, ಅದುವೇ ಲಾಕ್ ಡೌನ್. ಕೊರೊನಾ ತಡೆಯಬೇಕಾದ್ರೆ ಎಲ್ಲರೂ ಮನೆಯಲ್ಲಿಯೇ ಇರಿ ಎಂದು ಮೋದಿ ಮನವಿ ಮಾಡಿದ್ದಾರೆ.
ಕೊರೋನಾ ವೈರಸ್​​ ವಿರುದ್ಧ ಹೋರಾಟಕ್ಕೆ ಸರ್ಕಾರದೊಂದಿಗೆ ಜನ ಕೈ ಜೋಡಿಸಬೇಕಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ಇಂದು ರಾತ್ರಿ 12 ಗಂಟೆಯಿಂದ ಇಡೀ ದೇಶ ಸಂಪೂರ್ಣ ಲಾಕ್ ಡೌನ್ ಆಗಲಿದೆ. ದೇಶಾದ್ಯಂತ ಲಾಕ್ ಡೌನ್ ಮಾಡಲಾಗುವುದು. ಜನತಾ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್​​ಡೌನ್ ಮಾಡಲಾಗುವುದು. ಹಾಗಾಗಿ ಕೇಂದ್ರದ ಆದೇಶವನ್ನು ಪಾಲಿಸಿ 21 ದಿನಗಳ ಕಾಲ ಮನೆಯಲ್ಲೇ ಇರಬೇಕಿದೆ. ನಾವು ಮುಂದಿನ 21 ದಿನ ದೇಶಕ್ಕಾಗಿ ಮನೆಯಲ್ಲೇ ಇರದೆ ಹೋದಲ್ಲಿ, ಭಾರತವೂ 21 ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಕೋವಿಡ್-19 ತಡೆಗೆ ಸಾಮಾಜಿಕ ಅಂತರ ಮುಖ್ಯ.ಈ ಮಾರಕ ವೈರಾಣು ಹೇಗೆ ಹರಡುತ್ತದೆ ಎಂದು ಇಲ್ಲಿಯವರೆಗೂ ಸ್ಪಷ್ಟತೆ ಸಿಕ್ಕಿಲ್ಲ. ಇದರ ಪ್ರಾಥಮಿಕ ಗುಣಲಕ್ಷಣಗಳು ಏನು ಎಂಬುದು ಯಾರಿಗೂ ಅರ್ಥ ಆಗಿಲ್ಲ. ಸಾಮಾಜಿಕ ಅಂತರವೂ ನನಗೂ ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

Leave A Reply

Your email address will not be published.