ಬೆಂಗಳೂರು : ಹೆಚ್ಚುತ್ತಿರುವ ಕೊರೊನಾ ಹೆಮ್ಮಾರಿಯ ನಿಯಂತ್ರಣಕ್ಕೆ ಸರಕಾರಿ ಉದ್ಯೋಗಿಗಳನ್ನು ಬಳಕೆ ಮಾಡಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದೆ. ಕೊರೊನಾ ನಿಯಂತ್ರಣಕ್ಕಾಗಿ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವಿರುವ ಕಾರಣ ಸರ್ಕಾರಿ ಉದ್ಯೋಗಿಗಳ ಬಳಕೆಗೆ ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸರಕಾರಿ ಇಲಾಖೆ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ 50 ವರ್ಷ ಒಳಗಿನ ಅಧಿಕಾರಿಗಳು, ಸಿಬ್ಬಂದಿಗಳ ಮಾಹಿತಿ ನೀಡಲು ಸೂಚನೆ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡುವಂತೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ಇಲಾಖೆಯಲ್ಲಿ ಶೇ.25 ರಿಂದ 50ಕ್ಕಿಂತ ಹೆಚ್ಚದಂತೆ ಉದ್ಯೋಗಿಗಳನ್ನು ಇಲಾಖಾ ಕೆಲಸಕ್ಕೆ ಇಟ್ಟುಕೊಂಡು, ಉಳಿದವರನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳಬಹುದಾಗಿದೆ. ಗರ್ಭಿಣಿ, ಬಾಣಂತಿ ಹಾಗೂ ವಿಕಲಚೇತನರನ್ನು ಹೊರತು ಪಡಿಸಿ ಉಳಿದವರು ವಿಪತ್ತು ನಿರ್ವಹಣಾ ಕಾಯ್ದೆಯ ಆದೇಶದಲ್ಲಿ ಕೆಲಸ ನಿರ್ವಹಿಸಬೇಕು ಮತ್ತು ಯಾವುದೇ ವಿನಾಯಿತಿ ಲಭ್ಯವಿರುವುದಿಲ್ಲ ಎಂದು ಸೂಚಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸುತ್ತಮುತ್ತಲಿನ ಭಾಗಗಳಲ್ಲಿ ವಾಸವಾಗಿರುವ ಅಧಿಕಾರಿಗಳು, ಸಿಬ್ಬಂದಿಗಳ ಮಾಹಿತಿ ನೀಡುವಂತೆ ಸೂಚನೆ ಸೂಚಿಸಲಾಗಿದ್ದು, ಜುಲೈ 10ರಂದು ಸಂಜೆ 5 ಗಂಟೆ ಒಳಗೆ ಬಿಬಿಎಂಪಿ ಆಯುಕ್ತರ ಇ-ಮೇಲ್ ಗೆ ಮಾಹಿತಿ ನೀಡುವಂತೆ ಖಡಕ್ ಸೂಚನೆ ನೀಡಲಾಗಿದೆ.