ಕುವೈತ್ : ಚೀನಾದಲ್ಲಿ ಮರಣ ಮೃದಂಗವನ್ನು ಬಾರಿಸಿದ್ದ ಕೊರೊನಾ (ಕೋವಿದ್-19) ವೈರಸ್ ಇದೀಗ ಗಲ್ಪ್ ರಾಷ್ಟ್ರ ಕುವೈತ್ ನಲ್ಲಿಯೂ ತನ್ನ ಕದಂಬಬಾಹುವನ್ನು ಚಾಚುತ್ತಿದೆ. ಕೊರೊನಾ ವೈರಸ್ ಪ್ರಕರಣ ಪತ್ತೆಯಾಗುತ್ತಿದ್ದಂತೆಯೇ ಕುವೈತ್ ಸಚಿವಾಲಯ ಶಾಲೆಗಳಿಗೆ ರಜೆ ನೀಡಿದ್ದು, ಸಾರ್ವಜನಿಕ ಪ್ರದೇಶಗಳಿಗೆ ಅನಿರ್ಧಿಷ್ಟಾವಧಿಗೆ ನಿಷೇಧ ಹೇರಿದೆ. ಮಾತ್ರವಲ್ಲ ಚರ್ಚ್ ನಲ್ಲಿ ಪ್ರಾರ್ಥನೆಯನ್ನೂ ನಿಷೇಧಿಸಿದ್ದು, ಭಾರತ – ಕುವೈತ್ ನಡುವಿನ ವಿಮಾನಯಾನ ಸಂಪರ್ಕ ಕೂಡ ಕಡಿತಗೊಳ್ಳಲಿದೆ. ಕೊರೊನಾ ಭೀತಿಯಿಂದಾಗಿ ಭಾರತೀಯರು ಆತಂಕದಲ್ಲಿದ್ದಾರೆ.

ಇರಾನಿನಿಂದ ಕುವೈತ್ ಗೆ ಬಂದ ಮೂವರಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಇದೀಗ 45 ಜನರಿಗೆ ವ್ಯಾಪಿಸಿದೆ. ಕೊರೊನಾ ವೈರಸ್ ಸೋಂಕಿತರನ್ನು ಖಾಸಗಿ ಹೋಟೆಲ್ ನಲ್ಲಿ ಇರಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಕೊರೊನಾ ವೈರಸ್ ಸೋಂಕು ಇನ್ನಷ್ಟು ಜನರಿಗೆ ವ್ಯಾಪಿಸೋ ಭೀತಿ ಎದುರಾಗಿದೆ.

ಹೀಗಾಗಿ ಕುವೈತ್ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಶಾಲೆಗಳಿಗೆ ಅನಿರ್ಧಿಷ್ಟಾವಧಿಗೆ ರಜೆ ಘೋಷಿಸಿದೆ. ಅಲ್ಲದೇ ಸಾರ್ವಜನಿಕ ಪ್ರದೇಶಗಳಾದ ಹೋಟೆಲ್, ಮಾಲ್, ಕಾಫಿ ಶಾಪ್ ಪಾರ್ಕ್ ಸೇರಿದಂತೆ ಎಲ್ಲೆಡೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧವನ್ನು ಹೇರಿದೆ. ಹೀಗಾಗಿ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಕುವೈತ್ ನಗರದ ಪ್ರಮುಖ ರಸ್ತೆಗಳೇ ಬಿಕೋ ಎನ್ನುತ್ತಿವೆ.

ಇನ್ನು ಮಾರ್ಚ್ 1 ರಿಂದ 14ರ ವರೆಗೆ ಚರ್ಚ್ ಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆಗೂ ನಿಷೇಧ ಹೇರಲಾಗಿದೆ. ಈ ಕುರಿತು ಈಗಾಗಲೇ ಪ್ರಕಟನೆ ಹೊರಡಿಸಿರೋ ಕುವೈತ್ ಸಚಿವಾಲಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ಕುವೈತ್ ನಾದ್ಯಂತ ಜನರು ಮಾಸ್ಕ್ ಬಳಸುವಂತೆ ಸೂಚಿಸಲಾಗಿದ್ದು, ವಿದೇಶಗಳಿಂದ ಬರುವವರ ಮೇಲೆ ಹದ್ದಿನಕಣ್ಣು ಇರಿಸಲಾಗಿದೆ.

ಇನ್ನು ಕುವೈತ್ ನಿಂದ ಭಾರತಕ್ಕೆ ಹೊರಡಲಿರುವ ವಿಮಾನಯಾನ ಸೇವೆ ಕೂಡ ರದ್ದಾಗುವ ಸಾಧ್ಯತೆಯಿದೆ. ಗಲ್ಪ್ ಡೈಲಿ ನ್ಯೂಸ್ ಆನ್ ಲೈನ್ ಈ ಕುರಿತು ವರದಿಯನ್ನು ಮಾಡಿದ್ದು, ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿಗೆ ಕವೈತ್ ನಿಂದ ಮುಂಬೈ, ಹೈದ್ರಾಬಾದ್, ಕೊಚ್ಚಿ, ಬೆಂಗಳೂರು ಮತ್ತು ದೆಹಲಿ ಪ್ರಯಾಣಿಸುವ ವಿಮಾನಗಳ ಸೇವೆ ರದ್ದಾಗಲಿದೆ ಎಂದು ತಿಳಿಸಿದೆ.

ಹೀಗಾಗಿ ಭಾರತೀಯರು ಆತಂಕಕ್ಕೆ ಒಳಗಾಗಿದ್ದಾರೆ. ಭಾರತೀಯರು ತಮ್ಮ ಸ್ವದೇಶಕ್ಕೆ ತೆರಳುವ ಪ್ರವಾಸದ ಅವಧಿಯನ್ನು ಮುಂದೂಡುವಂತೆಯೂ ಕುವೈತ್ ಸಚಿವಾಲಯ ಮನವಿ ಮಾಡಿಕೊಂಡಿದೆ. ಒಟ್ಟಿನಲ್ಲಿ ಕೊರೊನಾ ವೈರಸ್ ದಿನೇ ದಿನೇ ಕುವೈತ್ ಜನರನ್ನು ಹೈರಾಣಾಗಿಸುತ್ತಿದ್ದು, ಕುವೈತ್ ನಲ್ಲಿ ನೆಲೆಸಿರೋ ಭಾರತೀಯರ ನೆರವಿಗೆ ಸರಕಾರ ಧಾವಿಸಬೇಕಿದೆ.