ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶದಾದ್ಯಂತ ಆತಂಕವನ್ನು ತಂದೊಡ್ಡಿದೆ. ಹೀಗಾಗಿ ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನನ್ಉ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ.

ಕೊರೊನಾ ವೈರಸ್ ಸೋಂಕು ನಿಯಂತ್ರಣದ ಕುರಿತು ಪ್ರಧಾನಿ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದ್ದಾರೆ. ದೇಶ ಎದುರಿಸುತ್ತಿರುವ ಸವಾಲುಗಳು, ಕೊರೋನಾ ಸಮಸ್ಯೆ ನಿಭಾಯಿಸುವ ಬಗೆ, ಇದಕ್ಕೆ ರಾಜ್ಯ ಸರ್ಕಾರಗಳ ಸಹಕಾರ ಕುರಿತು ಸೂಕ್ತ ಸಲಹೆ, ಸೂಚನೆ ನೀಡಿದರು. ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರೋ ಕುರಿತು ಸೂಕ್ತ ಪ್ರತಿಬಂಧಕ ಕ್ರಮಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅಗತ್ಯ ವಸ್ತುಗಳ ಪೂರೈಕೆ ಮತ್ತಿತರ ವಿಚಾರಗಳ ಕುರಿತು ಪ್ರಧಾನಿ ಮಾಹಿತಿ ನೀಡಿದ್ದು, ದೆಹಲಿಯ ತಬ್ಲಿಕ್ ಜಮಾತ್ ನ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚಿ, ಅವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವಂತೆ ಸೂಚನೆಯನ್ನು ನೀಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್, ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಪರೆನ್ಸ್ ನಲ್ಲಿ ಪಾಲ್ಗೊಂಡಿದ್ದರು.