ಈ ಬಾರಿ ಭಕ್ತರೇ ಇಲ್ಲದೇ ನಡೆಯುತ್ತೆ ಪುತ್ತೂರು ಜಾತ್ರೆ !

0

ಪುತ್ತೂರು : ಇತಿಹಾಸ ಪ್ರಸಿದ್ದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಎಪ್ರಿಲ್ 10ರಂದು ಆರಂಭಗೊಳ್ಳಲಿದ್ದು ಎಪ್ರಿಲ್ 20ರ ವರೆಗೆ ನಡೆಯಲಿದೆ. ಆದರೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 10 ದಿನಗಳ ಕಾಲ ನಡೆಯುವ ಜಾತ್ರೆಯು ಭಕ್ತರಿಲ್ಲದೆ ನಡೆಯಲಿದೆ.

ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ಜಾತ್ರೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತೀ ನಿತ್ಯವೂ ನಡೆಯುವ ಪೂಜಾ ಉತ್ಸವಗಳಲ್ಲಿ, ಧಾರ್ಮಿಕ ಕಾರ್ಯಗಳಲ್ಲಿ ಕೇವಲ 10 ಮಂದಿಗಷ್ಟೇ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ವರ್ಷಂಪ್ರತಿ ನಡೆಯುತ್ತಿದ್ದ ಚಂದ್ರಮಂಡಲ, ಸಣ್ಣರಥ, ಬ್ರಹ್ಮರಥ, ಪಲ್ಲಕ್ಕಿ, ತೆಪ್ಪೋತ್ಸವ, ಪೇಟೆ ಸವಾರಿಯ ಸೇರಿದಂತೆ ಹೊರಾಂಗಣ ಅಥವಾ ರಾಜಾಂಗಣದಲ್ಲಿ ನಡೆಯುವ ಉತ್ಸವನ್ನು ರದ್ದುಗೊಳಿಸಲಾಗಿದೆ. ಇನ್ನು ಜಾತ್ರೆ ಗದ್ದೆ, ಸಂತೆ, ವ್ಯಾಪಾರ, ಜನಜಂಗುಳಿ, ಅಂಗಡಿಮುಂಗಟ್ಟು, ಯಕ್ಷಗಾನ, ಜಾಯಿಂಟ್ ವೀಲ್ ಸರ್ಕಸ್, ಸಿಡಿಮದ್ದು ಪ್ರದರ್ಶನ, ಸಾರ್ವಜನಿಕ ಅನ್ನಸಂತರ್ಪಣೆಯನ್ನು ನಿಷೇಧಿಸಲಾಗಿದೆ.

ದೇವಸ್ಥಾನದ ಒಳಗೆ, ಹೊರಗೆ ಸಾರ್ವಜನಿಕ ಭಕ್ತಾಧಿಗಳ ಪ್ರವೇಶವನ್ನೂ ಕೂಡ ಕಡ್ಡಾಯವಾಗಿ ನಿಷೇಧ ಹೇರಲಾಗಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.

ದೇವಸ್ಥಾನದ ಜಾತ್ರೆಯ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪುತ್ತೂರಿನ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

Leave A Reply

Your email address will not be published.