ಹೈದ್ರಾಬಾದ್: ದೇಶದೆಲ್ಲೆಡೆ ಕೊರೋನಾ ಎರಡನೇ ಅಲೆಯ ಪ್ರಭಾವ ಜೋರಾಗಿದ್ದು, ಹಳ್ಳಿ ಹಳ್ಳಿಗಳಲ್ಲೂ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಈ ಮಧ್ಯೆ ಕೊರೋನಾ ಸೋಂಕಿತ ವಿದ್ಯಾರ್ಥಿಯೊಬ್ಬ ಐಷೋಲೇಟೆಡ್ ಆಗಿರಲು ಜಾಗವಿಲ್ಲದೇ ಮರವೇರಿದ ಘಟನೆ ವರದಿಯಾಗಿದೆ.

ತೆಲಂಗಾಣ ನಲಗೊಂಡ ಜಿಲ್ಲೆಯ ಕೊತಾನಂದಿಕೊಂಡ ಗ್ರಾಮದ ವಿದ್ಯಾರ್ಥಿ ಶಿವ ಎಂಬಾತನೇ ಮರದ ಮೇಲೆ ಐಷೋಲೇಟ್ ಆಗ ವಿದ್ಯಾರ್ಥಿ. ಕಳೆದ ಕೆಲದಿನಗಳ ಹಿಂದೆ ಈತನಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು.

ವೈದ್ಯರು ಪರಿಶೀಲನೆ ನಡೆಸಿ, ಮನೆಯ ಸದಸ್ಯರೊಂದಿಗೆ ಸೇರದಂತೆ ಪ್ರತ್ಯೇಕವಾಗಿ ಇರುವಂತೆ ಸೂಚಿಸಿದ್ದರು. ಆದರೆ ಒಂದೇ ಕೋಣೆಯ ಮನೆಯಲ್ಲಿ ಪ್ರತ್ಯೇಕವಾಗಿರುವುದು ಕಷ್ಟ ಎಂಬ ಕಾರಣಕ್ಕೆ ಬಾಲಕ ಮನೆ ಸಮೀಪದ ಮೆರವೇರಿ ಅಲ್ಲಿಯೇ ಚಾದರ್ ಹಾಸಿಕೊಂಡು 11 ದಿನಗಳ ಕಾಲ ಐಷೋಲೇಟೆಡ್ ಆಗಿದ್ದಾನೆ.

ಹೀಗೆ ಬಾಲಕ ಮನೆಯ ಸದಸ್ಯರಿಗೆ ಕೊರೋನಾ ಹರಡದಂತೆ ತಡೆಯಲು 11 ದಿನಗಳ ಕಾಲ ಮರದ ಮೇಲೆ ಐಷೋಲೇಶನ್ ನಲ್ಲಿ ಇದ್ದ ಘಟನೆಯನ್ನು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಶಿವ ನಮ್ಮ ಹಳ್ಳಿಗಳಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯವಿಲ್ಲ. ಮನೆಯಲ್ಲೇ ಇದ್ದರೇ ಸೋಂಕು ಇತರರಿಗೆ ಹರಡುವ ಭಯವಿತ್ತು. ಹೀಗಾಗಿ ಮರವೇರಿದೆ. ನಾವು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕೆಂದರೇ 5 ಕಿಲೋಮೀಟರ್ ನಡೆಯಬೇಕು.

ಇನ್ನು ತುರ್ತು ಚಿಕಿತ್ಸೆ ಬೇಕೆಂದರೇ 30 ಕಿಲೋಮೀಟರ್ ಕ್ರಮಿಸಬೇಕು. ಹೀಗಾಗಿ ರೋಗನಿಯಂತ್ರಣ ಹಾಗೂ ಚಿಕಿತ್ಸೆ ನಮಗೆ ಸವಾಲಾಗಿದೆ ಎಂದಿದ್ದಾನೆ. ಜಿಲ್ಲಾಢಳಿತವೂ ಕೂಡ ಕೊರೋನಾ ಸಂಕಷ್ಟದಲ್ಲಿ ಈ ಗ್ರಾಮಸ್ಥರ ನೋವಿಗೆ ಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.
