ಬೆಂಗಳೂರು : ಡಿಜೆ ಹಳ್ಳಿ ಗಲಭೆ ಪ್ರಕರಣದ ಬೆನ್ನಲ್ಲೇ ಕನ್ನಡ ಖಾಸಗಿ ಸುದ್ದಿವಾಹಿಯ ನಿರೂಪಕ ರಕ್ಷತ್ ಶೆಟ್ಟಿ ಅವರಿಗೆ ವಿದೇಶದಿಂದ ಬೆದರಿಕೆ ಕರೆಗಳು ಬರಲಾರಂಭಿಸಿದೆ. ಗಲಭೆಗೆ ಸಂಬಂಧಿಸಿದಂತೆ ಎಸ್ ಡಿಪಿಐ ಹಾಗೂ ಪಿಎಫ್ ಐ ಹೆಸರನ್ನು ಬಳಕೆ ಮಾಡದಂತೆ ತಾಕೀತು ಮಾಡಿದ್ದು, ಪತ್ರಕರ್ತೆ ಗೌರಿ ಲಂಕೇಶ್ ಅವರ ರೀತಿಯಲ್ಲಿಯೇ ಹತ್ಯೆ ಮಾಡುವುದಾಗಿ ಅನಾಮಿಕರು ಬೆದರಿಕೆಯನ್ನು ಒಡ್ಡಿದ್ದಾರೆ.

ಫೇಸ್ ಬುಕ್ ನಲ್ಲಿ ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ನವೀನ್ ಎಂಬಾತ ಪ್ರಚೋದನಾಕಾರಿ ಪೋಸ್ಟ್ ಮಾಡಿದ ಬೆನ್ನಲ್ಲೇ ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಿತ್ತು. ಗಲಭೆಯಲ್ಲಿ ಹಲವು ವಾಹನಗಳು, ಶಾಸಕರ ಮನೆ ಸೇರದಂತೆ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

ಎಸ್ ಡಿಪಿಐ ಮುಖಂಡ, ಕಾಂಗ್ರೆಸ್ ಮುಖಂಡ ಸೇರಿದಂತೆ ಹಲವರ ವಿರುದ್ದ ಗಲಭೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಆರೋಪಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ವಾಹಿನಿಗಳಲ್ಲಿ ಸುದ್ದಿಗಳನ್ನು ಪ್ರಸಾರ ಮಾಡಲಾಗಿತ್ತು. ಈ ನಡುವಲ್ಲೇ ದಕ್ಷಿಣ ಕನ್ನಡ ಮೂಲಕ ಯುವ ನಿರೂಪಕ ರಕ್ಷತ್ ಶೆಟ್ಟಿ ಅವರಿಗೆ ಬೆದರಿಕೆ ಕರೆಗಳು ಬರಲು ಆರಂಭಿಸಿದೆ.

ವಿದೇಶಗಳಿಂದ ಕರೆ ಮಾಡುತ್ತಿರುವ ಅನಾಮಿಕರು ಗಲಭೆಗೆ ಸಂಬಂಧಿಸಿದಂತೆ ಎಸ್ ಡಿಪಿಐ ಹಾಗೂ ಪಿಎಫ್ ಐ ಹೆಸರನ್ನು ಪ್ರಸ್ತಾಪ ಮಾಡಬಾರದು ಎಂಬ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ರಕ್ಷತ್ ಶೆಟ್ಟಿ ಅವರಿಗೆ ಬೆದರಿಕೆಯೊಡ್ಡುವ ಪೋಸ್ಟರ್ ಗಳು ಕಂಡುಬರುತ್ತಿದೆ.

ರಕ್ಷತ್ ಶೆಟ್ಟಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದಂತೆಯೇ ಕರಾವಳಿ ಭಾಗದ ಹಲವರು ಕೂಡ ರಕ್ಷತ್ ಶೆಟ್ಟಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆಯನ್ನು ನಡೆಸಿ, ಗಲಭೆಗೆ ಕಾರಣರಾದವರ ವಿರುದ್ದ ಕ್ರಮಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.