ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಸಂವೇದ ಇ-ಕ್ಲಾಸ್ : ಚಂದನ ಕಾರ್ಯಕ್ರಮದ ವೇಳಾಪಟ್ಟಿ ಪ್ರಕಟ

0

ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈಗಾಗಲೇ ದೂರದರ್ಶನದ ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ. ಇದೀಗ ಮುಂದುವರಿದ ಸರಣಿಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಅಗಸ್ಟ್ 17ರಿಂದ ಸಪ್ಟೆಂಬರ್ 11ರ ವರೆಗೆ ಎರಡನೇ ಹಂತದಲ್ಲಿ 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮ ಪ್ರಸಾರವಾಗಲಿದೆ. ಕಳೆದೊಂದು ತಿಂಗಳಿನಿಂದಲೂ ಹೈಸ್ಕೂಲು ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಇದೀಗ ಎರಡನೇ ಹಂತದ ಕಾರ್ಯಕ್ರಮ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರ ಆಗಲಿದೆ ಎಂದು ಡಿಎಸ್ಇಆರ್‌ಟಿ ಮಾಹಿತಿ ನೀಡಿದೆ.

ವೇಳಾಪಟ್ಟಿ ಹೀಗಿದೆ: ಕನ್ನಡ, ಇಂಗ್ಲಿಷ್‌ (ಪ್ರಥಮ ಹಾಗೂ ದ್ವಿತೀಯ ಭಾಷೆ) ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಪ್ರಥಮ ಭಾಷೆ ಸಂಸ್ಕೃತ, ಹಿಂದಿ (ತೃತೀಯ) ಮತ್ತು ಪ್ರಥಮ ಭಾಷೆ ಉರ್ದು ವಿಷಯಗಳಲ್ಲಿ ಸಿದ್ಧಪಡಿಸಿರುವ ಪಾಠಗಳನ್ನು ಪ್ರತಿ ದಿನ ಬೆಳಗ್ಗೆ 9.30ರಿಂದ 11 ಗಂಟೆಯವರೆಗೆ, 11.30ರಿಂದ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ರಿಂದ 4.30ರವರೆಗೆ ಹಾಗೂ 5 ರಿಂದ 5.30ರವರೆಗೆ ನಿಗದಿತ ವೇಳಾಪಟ್ಟಿಯಂತೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Leave A Reply

Your email address will not be published.