ದ.ಕ. ಜಿಲ್ಲಾ ಕಾಂಗ್ರೆಸ್ ಚುಕ್ಕಾಣಿ ಹಿಡಿತಾರಾ ಅಭಯಚಂದ್ರ..?

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹಾಲಿ ಅಧ್ಯಕ್ಷರ ಸ್ಥಾನ ಬದಲಾವಣೆಗೆ ಕೆಪಿಸಿಸಿ ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಅಲ್ಲದೇ ಮಾಜಿ ಸಚಿವ ಅಭಯಚಂದ್ರ ಅವರಿಗೆ ಡಿಸಿಸಿ ಪಟ್ಟ ಕಟ್ಟುವುದು ಬಹುತೇಕ ಖಚಿತವಾಗಿದ್ದು, ಕೆಪಿಸಿಸಿ ಈ ಕುರಿತು ಗಂಭೀರ ಚಿಂತನೆ ನಡೆಸಿದೆ.

ಕಳೆದ 3 ವರ್ಷಗಳಿಂದ ಅಧ್ಯಕ್ಷರಾಗಿರುವ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರ ಅವಧಿ ಕೊನೆಗೊಳ್ಳುತ್ತಿದೆ. ಕಾಂಗ್ರೆಸ್ಗೆ ಮರು ಚೈತನ್ಯವನ್ನು ನೀಡುವ ನಿಟ್ಟಿನಲ್ಲಿ ಅಧ್ಯಕ್ಷರ ಬದಲಾವಣೆಗೆ ಕೆಪಿಸಿಸಿ ಮನಸ್ಸು ಮಾಡಿದೆ. ಆದರೆ ಡಿಸಿಸಿ ಚುಕ್ಕಾಣಿ ಹಿಡಿಯಲು ಪ್ರಭಾವಿ ಕಾಂಗ್ರೆಸ್ ನಾಯಕ ರಮಾನಾಥ ರೈ ಹಿಂದೇಟು ಹಾಕಿದ್ದಾರೆ. ಯುವಕರಿಗೆ ಮಣೆ ಹಾಕೋದಕ್ಕೆ ಕೆಪಿಸಿಸಿ ಸಿದ್ದವಿಲ್ಲ. ಈ ನಿಟ್ಟಿನಲ್ಲಿ ಅನುಭವಿ ಮುಖಂಡರಿಗೆ ಪಟ್ಟಕಟ್ಟಲು ಕೆಪಿಸಿಸಿ ತೀರ್ಮಾನಿಸಿದೆ. ಈ ನಡುವೆ ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದ ಪಿ.ವಿ.ಮೋಹನ್ ಹಾಗು ಐವನ್ ಡಿಸೋಜಾ ಅವರಿಗೆ ಎಐಸಿಸಿ ಕಾರ್ಯದರ್ಶಿ ಹುದ್ದೆ ನೀಡಿ ಸಮಾಧಾನ ಪಡಿಸುವ ಕಾರ್ಯವನ್ನು ಮಾಡಲಾಗಿದೆ.

ಹೀಗಾಗಿ ಮೂಡಬಿದಿರೆಯ ಮಾಜಿ ಶಾಸಕ ಅಭಯಚಂದ್ರ ಜೈನ್ ಅವರನ್ನೇ ಡಿಸಿಸಿ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲು ಕೆಪಿಸಿಸಿ ಗಂಭೀರವಾಗಿ ಚಿಂತನೆ ನಡೆಸಿದೆ. ಸಾಲದಕ್ಕೆ ಅಭಯಚಂದ್ರ ಜೈನ್ ಕೂಡ ಡಿಸಿಸಿ ಅಧ್ಯಕ್ಷರಾಗಲು ಒಲವು ತೋರಿದ್ದಾರೆ ಎನ್ನಲಾಗು ತ್ತಿದೆ. ಸತತ 4 ಬಾರಿ ಶಾಸಕರಾಗಿ, ಒಂದು ಬಾರಿ ಸಚಿವರಾಗಿರುವ ಅನುಭವ ಹೊಂದಿರುವ ಅಭಯಚಂದ್ರ ಜೈನ್ ಜಿಲ್ಲಾಧ್ಯಕ್ಷ ಸ್ಥಾನಕ್ಕೇರಿದ್ರೆ ಯುವ ನಾಯಕ ಮಿಥುನ್ ರೈ ಅವರಿಗೆ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತನದ ಹಾದಿ ಹಾದಿ ಸುಗಮವಾಗಲಿದೆ ಅನ್ನೋದು ಸದ್ಯದ ಲೆಕ್ಕಾಚಾರ.

ಕರಾವಳಿ ಭಾಗಕ್ಕೆ ಒಂದು ರಾಜ್ಯಸಭಾ ಸ್ಥಾನ ಲಭಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಕರ್ ಫೆರ್ನಾಂಡೀಸ್ ಈ ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಹಿಂದೇಟು ಹಾಕುವ ಸಾಧ್ಯತೆಯಿದೆ. ಹೀಗಾಗಿ ಈ ಸ್ಥಾನವೂ ಅಭಯಚಂದ್ರ ಜೈನ್ ಅವರಿಗೆ ಲಭಿಸಲಿದೆ ಅನ್ನೋ ಲೆಕ್ಕಾಚಾರವೂ ನಡೆಯುತ್ತಿದೆ.

Comments are closed.