ಬೆಂಗಳೂರು : ಡ್ರಗ್ಸ್ ದಂಧೆ ಪ್ರಕರಣದ ಆರೋಪದಲ್ಲಿ ಸಿಲುಕಿರುವ ಖ್ಯಾತ ನಿರೂಪಕಿ ಅನುಶ್ರೀ ಕಣ್ಣೀರಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅನುಶ್ರೀ ಸಿಸಿಬಿ ವಿಚಾರಣೆಯ ವೇಳೆಯಲ್ಲಿ ತನ್ನನ್ನ ಅಪರಾಧಿಯಂತೆ ಬಿಂಬಿಸಲಾಗಿದೆ ಎಂದು ಬಾವುಕರಾಗಿದ್ದಾರೆ.

ಮಂಗಳೂರು ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ವಿಚಾರಣೆಯನ್ನು ಎದುರಿಸಿರುವ ನಿರೂಪಕಿ ಅನುಶ್ರೀ ಇದೀಗ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. 2020 ಸೆ 24 ನನ್ನ ಜೀವನದಲ್ಲೇ ನಾನು ಎಂದಿಗೂ ನೆನಪುಮಾಡಿಕೊಳ್ಳದ ಒಂದು ಕರಾಳ ದಿನ.
12 ವರ್ಷಗಳ ಹಿಂದೆ ಒಂದು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಜಯ ಸಾಧಿಸಿದಾಗ, ಮುದೊಂದು ದಿನ ಇದೇ ನನಗೆ ಮುಳ್ಳಾಗುತ್ತೆ ಎಂದು ನಾನು ಭಾವಿಸಿರಲಿಲ್ಲ. ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಅಥವಾ ಅನುಕಂಪಕ್ಕಾಗಿ ಈ ವಿಡಿಯೋವನ್ನು ಮಾಡುತ್ತಿಲ್ಲ. ಸುತ್ತಮುತ್ತಲಿನ ಮಂದಿ ನನ್ನ ಬಗ್ಗೆ ಮಾತನಾಡುತ್ತಿರುವುದರಿಂದ ಸ್ಪಷ್ಟನೆ ನೀಡಲು ಈ ವಿಡಿಯೋ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟಿಸ್ ಬಂದಿದ್ದರಿಂದ ನನಗೆ ಬೇಜಾರಿಲ್ಲ. ಅಲ್ಲದೇ ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಆಗುವುದಿಲ್ಲ. ಆದರೆ, ಈ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾ ನೋವನ್ನುಂಟು ಮಾಡಿದೆ. ಕಳೆದೊಂದು ವಾರದಿಂದಲೂ ನಮ್ಮ ಮನೆಯವರ ನೆಮ್ಮದಿ ಹಾಳು ಮಾಡಿದೆ ಎಂದು ಕಣ್ಣೀರಿಟ್ಟಿದ್ದಾರೆ.

ನಾನು ಎಂದೂ ತಪ್ಪು ಮಾಡಿಲ್ಲ. ತಪ್ಪು ಮಾಡುವುದೂ ಇಲ್ಲಾ. ನನ್ನನ್ನು ಬೆಳೆಸಿದವರು ನೀವು. ಈ ಕಷ್ಟ ಕಾಲದಲ್ಲಿ ಏನು ಹೇಳದೆ, ಏನು ಕೇಳದೆ ಅನುಶ್ರೀ ನೀವು ಏನಂತ ನಮಗೆ ಗೊತ್ತೆಂದು ನನ್ನ ಜತೆ ನಿಂತ ಕನ್ನಡ ಜನತೆಗೆ ನಾನು ಧನ್ಯವಾದಗಳು ಸಲ್ಲಿಸುತ್ತಿದ್ದೇನೆ. ನನ್ನ ವಿರುದ್ದ ಅಂತೆ ಕಂತೆಗಳು ಹರಿಡದಾಡುತ್ತಿವೆ. ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಮಾತನಾಡುವಾಗ ಸೂಕ್ಷ್ಮತೆಯನ್ನು ಅರಿಯಿರಿ ಎಂದು ನಿರೂಪಕಿ, ನಟಿ ಅನುಶ್ರೀ ಮನವಿ ಮಾಡಿದ್ದಾರೆ.
