ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ಸಿಎಂಗೆ ಪತ್ರ ಬರೆದ ಹೊರಟ್ಟಿ

0

ಹುಬ್ಬಳ್ಳಿ : ಹಳೆ ಪಿಂಚಣಿ ಜಾರಿಗೆ ಒತ್ತಾಯಿಸಿ ಎನ್ ಪಿಎಸ್ ನೌಕರರು ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ರಾಜ್ಯ ಸರಕಾರ ಮಾತ್ರ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಪಡಿಸಿಲ್ಲ. ಈ ಹಿನ್ನೆಲೆಯಲ್ಲೀಗ ತೆರೆ ಮರೆಯಲ್ಲಿಯೇ ಬೃಹತ್ ಹೋರಾಟಕ್ಕೆ ಎನ್ ಪಿಎಸ್ ನೌಕರರು ಸಜ್ಜಾಗುತ್ತಿದ್ದಾರೆ. ಈ ನಡುವಲ್ಲೇ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಒತ್ತಾಯಿಸಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

2006ರ ಏಪ್ರಿಲ್‌ 1ರಿಂದ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ ನೌಕರರಿ ಮಾರಕವಾಗಿರುವ ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸಿ ಏಕರೂಪದ ಪಿಂಚಣಿ ವ್ಯವಸ್ಥೆ ಜಾರಿಗಾಗಿ ನೌಕರರು ಹೋರಾಟಗಳನ್ನು ಮಾಡಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ತಾವು ಕೂಡ ನೌಕರರನ್ನು ಭೇಟಿ ಮಾಡಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದೀರಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ನೌಕರರ ಹೋರಾಟಕ್ಕೆ ಮಣಿದಿದ್ದ ಹಿಂದಿನ ಸರ್ಕಾರ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ವರದಿ ನೀಡಲು ಅಧಿಕಾರಿಗಳ ಸಮಿತಿ ರಚಿಸಿತ್ತು. 2019ರಲ್ಲಿ ಸಮಿತಿಯ ಒಂದು ಸಭೆ ನಡೆದಿದ್ದು ಬಿಟ್ಟರೆ, ಮತ್ಯಾವುದೇ ಪ್ರಗತಿಯಾಗಿಲ್ಲದಿರುವುದು ನೋವಿನ ಸಂಗತಿ.ರಾಜ್ಯದಲ್ಲಿ 7.41 ಲಕ್ಷ ಸರ್ಕಾರಿ ನೌಕರರಿದ್ದು, ಈ ಪೈಕಿ 5.12 ಲಕ್ಷ ಮಂದಿ ಹಳೇ ಪಿಂಚಣಿ ಯೋಜನೆಯಲ್ಲಿದ್ದಾರೆ. 2.28 ಲಕ್ಷ ನೌಕರರು ಹೊಸ ಪಿಂಚಣಿ ವ್ಯವಸ್ಥೆಯಲ್ಲಿದ್ದಾರೆ.

ಕೇಂದ್ರ ಸರ್ಕಾರ ನೂತನ ಪಿಂಚಣಿ ಯೋಜನೆಯನ್ನು ಕಡ್ಡಾಯಗೊಳಿಸದೆ, ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಹಾಗಾಗಿ, ತಾವು ಹಿಂದೆ ನೀಡಿದ ಭರವಸೆಯಂತೆ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

Leave A Reply

Your email address will not be published.