ಹುಬ್ಬಳ್ಳಿ : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ ಸೇರಿದಂತೆ ಹಲವು ಉದ್ಯಮಿಗಳ ಬಂಧನವಾಗಿತ್ತು. ಇದೀಗ ತುಪ್ಪದ ಬೆಡಗಿ ರಾಗಿಣಿ ಜೊತೆಗೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರೋರ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಹಲವರ ಬೆನ್ನು ಬಿದ್ದಿದ್ದಾರೆ. ಇದೀಗ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಟಿ ರಾಗಿಣಿ ಜೊತೆಗೆ ನಂಟು ಹೊಂದಿದ್ದ ಮಾಜಿ ಸಚಿವರ ಆಪ್ತರೋರ್ವರನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ ಫೋಟೋ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಗಿರೀಶ್ ಗದಿಗೆಪ್ಪಗೌಡರ ಅವರನ್ನು ವಶಕ್ಕೆ ಪಡೆದ ಸಿಸಿಬಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ನಟಿ ರಾಗಿಣಿ ಜೊತೆಗೆ ಈ ಹಿಂದೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಗಿರೀಶ್ ಗದಿಗೆಪ್ಪಗೌಡರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ರಾಗಿಣಿ ಜೊತೆಗೆ ಗೋವಾಕ್ಕೂ ಕೂಡ ತೆರಳಿದ್ದಾರೆನ್ನಲಾಗುತ್ತಿದ್ದು, ರಾಗಿಣಿ ಬಂಧನವಾಗುತ್ತಿದ್ದಂತೆಯೇ ಗಿರೀಶ್ ಗದಿಗೆಪ್ಪಗೌಡ ಎಲ್ಲಾ ಪೋಟೋಗಳನ್ನು ಡಿಲೀಟ್ ಮಾಡಿದ್ದರು. ಅಲ್ಲದೇ ತಮ್ಮ ಫೇಸ್ ಬುಕ್ ಖಾತೆಯನ್ನೇ ಗಿರೀಶ್ ಡಿಲೀಟ್ ಮಾಡಿದ್ದಾರೆ.

ಆದರೆ ರಾಗಿಣಿ ಜೊತೆಗಿದ್ದ ಪೋಟೋಗಳು ಮೊಬೈಲ್ ನಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿಯೇ ಗಿರೀಶ್ ಗದಿಗೆಪ್ಪ ಅವರನ್ನು ಬಂಧಿಸಿ ಸಿಸಿಬಿ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಗಿರೀಶ್ ಅವರ ವಿಚಾರಣೆಯ ಬಳಿಕ ರಾಗಿಣಿಗೂ ಹುಬ್ಬಳ್ಳಿಗೂ ಏನಾದ್ರೂ ನಂಟಿದ್ಯಾ ಅನ್ನೋದು ಬಯಲಾಗಲಿದೆ.